ಮೃತ ದಲಿತ ವೃದ್ಧೆಯ ಅಂತ್ಯಸಂಸ್ಕಾರಕ್ಕೆ ಮೇಲ್ಜಾತಿಯ ಜನರಿಂದ ಅಡ್ಡಿ
ಸಾಂದರ್ಭಿಕ ಚಿತ್ರ
ಜೈಪುರ,ಜ.4: ರಾಜಸ್ಥಾನದ ಟೊಂಕ್ ಜಿಲ್ಲೆಯ ಗಾತಾ ಗ್ರಾಮದಲ್ಲಿ ಬಹುಸಂಖ್ಯಾತರಾಗಿರುವ ಜಾಟ್ ಸಮುದಾಯಕ್ಕೆ ಸೇರಿದ ಜನರು ಸಾರ್ವಜನಿಕ ರುದ್ರಭೂಮಿಯಲ್ಲಿ ವೃದ್ಧೆಯೊಬ್ಬರ ಅಂತ್ಯಸಂಸ್ಕಾರ ನಡೆಸದಂತೆ ದಲಿತರಿಗೆ ತಡೆಯೊಡ್ಡಿದ ಘಟನೆ ಇತ್ತೀಚಿಗೆ ನಡೆದಿದೆ.
ಜಾಟರು ಚಿತೆಯನ್ನು ಧ್ವಂಸಗೊಳಿಸಿದ್ದಲ್ಲದೆ,ಮೃತ ಫುಲಾದೇವಿಯ ಕುಟುಂಬಕ್ಕೆ ಬೆದರಿಕೆಯನ್ನೂ ಒಡ್ಡಿದ್ದರು.
ಇದನ್ನು ವಿರೋಧಿಸಿ ದಲಿತರು ಟೊಂಕ್ ಜಿಲ್ಲಾ ಕೇಂದ್ರದಲ್ಲಿ ಧರಣಿ ನಡೆಸಿದ ಬಳಿಕವಷ್ಟೇ ಪೊಲೀಸರು ಮಧ್ಯಪ್ರವೇಶ ಮಾಡಿದ್ದರು. ಆದರೂ ಸಾಮಾನ್ಯವಾಗಿ ಅಂತ್ಯಸಂಸ್ಕಾರಗಳು ನಡೆಯುವ ಶೆಡ್ ನಲ್ಲಿಯ ವೇದಿಕೆಯ ಬದಲಾಗಿ ನೆಲದಲ್ಲಿ ಫುಲಾದೇವಿಯ ಅಂತ್ಯಸಂಸ್ಕಾರ ನಡೆದಿದೆ.
ವರ್ಷಗಳಿಂದಲೂ ತಾವು ಜಾತಿ ತಾರತಮ್ಯವನ್ನು ಎದುರಿಸುತ್ತಿದ್ದೇವೆ ಎಂದು ಮೃತ ವೃದ್ಧೆಯ ಕುಟುಂಬ ಸದಸ್ಯರು ಹೇಳಿದರು.
ಘಟನೆ ನಡೆದ ನಾಲ್ಕು ದಿನಗಳ ಬಳಿಕ,ಡಿ.23ರಂದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಟೊಂಕ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಚೌಧರಿಯನ್ನು ಮುಖ್ಯ ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ಮಾಧ್ಯಮ ವರದಿಯು ತಿಳಿಸಿದೆ.
ಈವರೆಗೆ ಯಾರನ್ನೂ ಬಂಧಿಸದಿರುವುದಕ್ಕೆ ಪೊಲೀಸರನ್ನು ತರಾಟೆಗೆತ್ತಿಕೊಂಡಿರುವ ಜೈಪುರದ ಸೆಂಟರ್ ಫಾರ್ ದಲಿತ ರೈಟ್ಸ್,ದಮನಿತ ಜಾತಿಗಳು ಸದಾ ಭೀತಿಯಲ್ಲೇ ಬದುಕುತ್ತಿರುವುದನ್ನು ಬೆಟ್ಟು ಮಾಡಿದೆ.