ಎನ್ಆರ್ಸಿ ವಿರೋಧಿಸಿ ದೇಶಾದ್ಯಂತ ‘ಗಾಂಧಿ ಶಾಂತಿ ಯಾತ್ರೆ’: ಯಶವಂತ್ ಸಿನ್ಹಾ

ಮುಂಬೈ, ಜ.4: ಪೌರತ್ವ ಕಾಯ್ದೆ, ಎನ್ಆರ್ಸಿ ಮತ್ತು ಎನ್ಪಿಆರ್ ವಿರೋಧಿಸಿ ದೇಶದಾದ್ಯಂತ ‘ಗಾಂಧಿ ಶಾಂತಿ ಯಾತ್ರೆ’ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ರಾಷ್ಟ್ರಮಂಚ ವೇದಿಕೆಯಡಿ ಆಯೋಜಿಸಲಾಗಿರುವ ಶಾಂತಿ ಯಾತ್ರೆಗೆ ಜನವರಿ 9ರಂದು ಮುಂಬೈಯ ಅಪೋಲೊ ಬಂದರ್ನಲ್ಲಿ ಚಾಲನೆ ದೊರಕಲಿದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ್, ಉತ್ತರಪ್ರದೇಶ, ಹರ್ಯಾಣ ಮತ್ತು ದಿಲ್ಲಿಯ ಮೂಲಕ ಒಟ್ಟು 3000 ಕಿ.ಮೀ ದೂರ ಕ್ರಮಿಸಿದ ಬಳಿಕ ಜನವರಿ 30ರಂದು (ಗಾಂಧೀಜಿ ಪುಣ್ಯತಿಥಿ)ಯಂದು ರಾಜ್ಘಾಟ್ನಲ್ಲಿ ಸಮಾಪನಗೊಳ್ಳಲಿದೆ ಎಂದವರು ಹೇಳಿದ್ದಾರೆ.
ಮಾಜಿ ಸಂಸದ ಶತ್ರುಘ್ನ ಸಿನ್ಹ, ಗುಜರಾತ್ನ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಸುರೇಶ್ ಮೆಹ್ತಾ, ಪೌರತ್ವ ಕಾಯ್ದೆ ಅಸಾಂವಿಧಾನಿಕವಾಗಿದ್ದು ನಿರ್ದಿಷ್ಟ ಸಮುದಾಯದ ವಿರುದ್ಧ ತಾರತಮ್ಯದ ನೀತಿ ಹೊಂದಿದೆ ಎಂದು ಆರೋಪಿಸಿದರು. ಅಲ್ಲದೆ ಬಿಜೆಪಿ ಆಡಳಿತ ಇರುವ ರಾಜ್ಯಗಳು ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯನ್ನು ಬಲಪ್ರಯೋಗದಿಂದ ಹತ್ತಿಕ್ಕಲು ಪ್ರಯತ್ನಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದವರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆ ಸರಕಾರ ಪ್ರಾಯೋಜಿತ ಭಯೋತ್ಪಾದನೆಯಾಗಿದೆ ಎಂದವರು ಹೇಳಿದ್ದಾರೆ.