ಸಿಎಎ ಮತ್ತು ಎನ್‌ಆರ್‌ಸಿ ಅಸಂವಿಧಾನಿಕ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಬಿ.ಎನ್.ಕೃಷ್ಣ

ಮೈಸೂರು,ಜ.4: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಮತ್ತು ಎನ್‌ಆರ್‌ಸಿ ಕಾಯ್ದೆಗಳು ಅಸಂವಿಧಾನಿಕ ಕಾಯ್ದೆಗಳು ಎಂದು ಸರ್ವೋಚ್ಚ ನ್ಯಾಯಲಯದ ನಿವೃತ್ತ ನ್ಯಾಯಾದೀಶ ಬಿ.ಎನ್.ಕೃಷ್ಣ ಅಭಿಪ್ರಾಯಿಸಿದರು.
ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಶನಿವಾರ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್) ವತಿಯಿಂದ ಆಯೋಜಿಸಿದ್ದ “ಮಾನವ ಹಕ್ಕುಗಳು ಬ್ರಿಟಿಷರ ಕೊಡುಗೆಯೆ?” ಕುರಿತು ಮಾತನಾಡಿದರು. ಕೇಂದ್ರ ಸರ್ಕಾರ ಸಿಎಎ ಮತ್ತು ಎನ್‌ಆರ್‌ಸಿ ತರುವ ಮೂಲಕ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ. ಸಂವಿಧಾನದ ಪರಿಚ್ಚೇದ 14 ರಲ್ಲಿ ಎಲ್ಲಾ ಧರ್ಮದವರೂ ಒಂದೇ ಎಂಬ ನಿಯಮವಿದೆ. ಆದರೆ ಧರ್ಮದ ಆಧಾರದಲ್ಲಿ ಇವರು ಪೌರತ್ವ ಕೊಡಲು ಮುಂದಾಗಿರುವುದು ಸರಿಯಲ್ಲ, ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ನೋಡಬಾರದು. ತಪ್ಪು ಯಾರೇ ಮಾಡಿದರೂ ಒಂದೇ ಕಾನೂನು, ಹಾಗಾಗಿ ಧರ್ಮದ ಹೆಸರಿನಲ್ಲಿ ಕಾಯ್ದೆಗಳನ್ನು ತರಬಾರದು ಎಂದು ಹೇಳಿದರು.
ಮಾನವ ಹಕ್ಕುಗಳು ಬ್ರಿಟಿಷರ ಕೊಡುಗೆ ಅಲ್ಲ, ಇದು ವ್ಯವಸ್ಥೆಗೆ ಅನುಗುಣವಾದ ಕಾನೂನು, ಈ ಕಾನೂನು ಎಲ್ಲಾ ದೇಶಗಳಲ್ಲೂ ಇದೆ. ನಾವು ಯಾವುದೇ ವ್ಯಕ್ತಿಯ ಮಾನ ಹರಣ ಮಾಡುವುದು ಅಪರಾಧ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ಮೂಲಕ ಕೆಂದ್ರ ಸರ್ಕಾರವೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ನಮ್ಮ ದೇಶಕ್ಕೆ ಮುಸ್ಲಿಂ, ಸಿಕ್ಖ್, ಕ್ರಿಶ್ಚಿಯನ್, ಹಿಂದೂ ಬರಲಿ ಅವರೆಲ್ಲರನ್ನೂ ಒಂದೇ ಭಾವನೆಯಲ್ಲಿ ನೋಡಬೇಕು. ಮೂವರನ್ನು ಒಪ್ಪಿಕೊಂಡು ಒಬ್ಬರನ್ನು ಒಪ್ಪಿಕೊಳ್ಳುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಹಕ್ಕುಗಳು ಬ್ರಿಟಿಷರ ಕೊಡುಗೆಯಲ್ಲ. ನಿಜಾರ್ಥದಲ್ಲಿ ಬ್ರಿಟಿಷರು ಭಾರತೀಯರ ಮಾನವ ಹಕ್ಕುಗಳನ್ನು ದಮನ ಮಾಡಿದ್ದರು. ವ್ಯಾಪಾರದ ದೃಷ್ಟಿಯಿಂದ ಭಾರತಕ್ಕೆ ಬಂದ ಬ್ರಿಟಿಷರು ಇಲ್ಲಿದ್ದ ಸಂಪತ್ತನ್ನು ದೋಚಿ ಇಂಗ್ಲೆಂಡ್ ರಾಷ್ಟ್ರವನ್ನು ಬೆಳೆಸಲು ಭಾರತೀಯರ ಮೇಲೆ ದೌರ್ಜನ್ಯ ಎಸಗಿದರು. ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡು ದಮನ ಮಾಡಿದರು. ಆದರೆ ಭಾರತೀಯ ಪರಂಪರೆಯಲ್ಲಿ ಮೂಲಭೂತ ಹಕ್ಕುಗಳ ಚಹರೆ ಇದೆ. ಮಹಾಭಾರತ, ರಾಮಾಯಣ, ವೇದೋಪನಿಷತ್ತು, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಮಾನವರಿಗೆ ಮಾನವ ಹಕ್ಕುಗಳನ್ನು ನೀಡಲಾಗಿತ್ತು ಎಂಬುದರ ಬಗ್ಗೆ ಕುರುಹುಗಳಿವೆ ಎಂದರು.
ಸಂವಿಧಾನ ತಜ್ಞ ಡಾ. ಸಿಕೆಎನ್ ರಾಜಾ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿಎಲ್‍ನ ಪ್ರೊ.ಪಂಡಿತಾರಾಧ್ಯ, ನಾ. ದಿವಾಕರ್ ಭಾಗವಹಿಸಿದ್ದರು. ನಂತರ ನಡೆದ ಸಂವಾದದಲ್ಲಿ ಸಮಾಜವಾದಿ ಪ.ಮಲ್ಲೇಶ್, ಪ್ರೊ.ರಾ.ಲಕ್ಷ್ಮೀನಾರಾಯಣ, ಡಾ.ವಿ.ಎನ್.ಲಕ್ಷ್ಮಿನಾರಾಯಣ್, ಜಿ.ಎಚ್. ನಾಯಕ್, ಪ್ರೊ.ಶಬ್ಬೀರ್ ಮುಸ್ತಾಫ, ಸ.ರಾ.ಸುದರ್ಶನ, ಕಂದೇಗಾಲ ಶ್ರೀನಿವಾಸ್, ರತಿರಾವ್, ಕೆ.ಬಸವರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







