ಶ್ರೀನಗರ: ಎಲ್‌ಇಟಿ ಉಗ್ರ ಸೆರೆ
ಶ್ರೀನಗರ, ಜ.4: ಲಷ್ಕರೆ ತೈಯಬ್ಬ ಸಂಘಟನೆಯ ಉಗ್ರ ನಿಸಾರ್ ಅಹ್ಮದ್ ದಾರ್ ಎಂಬಾತನನ್ನು ನಗರದ ಶ್ರೀ ಮಹಾರಾಜ ಹರಿಸಿಂಗ್ ಆಸ್ಪತ್ರೆಯಿಂದ ಉಗ್ರನನ್ನು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಪಡೆ ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತ ಉಗ್ರನ ಬಳಿಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈಗ ಆತನ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ಆತ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ. 23 ವರ್ಷದ ದಾರ್ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯವಾಗಿದ್ದು ಹಲವು ಹಿಂಸಾಕೃತ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಎನ್ನಲಾಗಿದೆ.
ಈತನ ವಿರುದ್ಧ ಕನಿಷ್ಟ 8 ಎಫ್‌ಐಆರ್ ದಾಖಲಾಗಿದ್ದು 2016ರಲ್ಲೇ 7 ಎಫ್‌ಐಆರ್ ದಾಖಲಾಗಿದೆ. ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಈತನನ್ನು 2016 ಮತ್ತು 2017ರಲ್ಲಿ ಬಂಧಿಸಲಾಗಿತ್ತು. ಗಂಡರ್‌ಬಾಲ್‌ನಲ್ಲಿ ನಡೆದಿದ್ದ ಪೊಲೀಸ್ ಕಾರ್ಯಾಚರಣೆ ಸಂದರ್ಭ ಓರ್ವ ಪಾಕಿಸ್ತಾನದ ಭಯೋತ್ಪಾದಕ ಹತನಾಗಿದ್ದ. ಆದರೆ ದಾರ್ ತಪ್ಪಿಸಿಕೊಂಡಿದ್ದ. ನಿಸಾರ್ ಅಹ್ಮದ್ ದಾರ್ ಉತ್ತರ ಕಾಶ್ಮೀರದಲ್ಲಿ ಲಷ್ಕರೆ ತೈಯಬ್ಬದ ಉನ್ನತ ನಾಯಕನಾಗಿದ್ದ ಸಲೀಮ್ ಪ್ಯಾರ್ರೆಯ ಸಹವರ್ತಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.