ಕೋಟಾದ ಜೆ.ಕೆ. ಲೋನ್ ಆಸ್ಪತ್ರೆಯಲ್ಲಿ 107ಕ್ಕೇರಿದ ಶಿಶುಗಳ ಸಾವು

ಕೋಟಾ, ಜ. 4: ಇಲ್ಲಿನ ಜೆ.ಕೆ. ಲೋನ್ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಮತ್ತೊಂದು ಶಿಶುವಿನ ಸಾವು ಸಂಭವಿಸಿದ್ದು, ಇದರೊಂದಿಗೆ ಇದುವರೆಗೆ ಮೃತಪಟ್ಟ ಶಿಶುಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 23 ಹಾಗೂ 24ರಂದು ಭೇಟಿ ನೀಡಿದ್ದ ಮೂವರು ವೈದ್ಯರನ್ನು ಒಳಗೊಂಡ ರಾಜ್ಯ ಸರಕಾರದ ಸಮಿತಿ ಜೆ.ಕೆ. ಲೋನ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದೆ ಹಾಗೂ ಇದನ್ನು ಸುಧಾರಿಸಬೇಕು ಎಂದು ಹೇಳಿತು. ಆದರೆ, ಸಮಿತಿ ವೈದ್ಯರಿಗೆ ಕ್ಲೀನ್ ಚಿಟ್ ನೀಡಿತ್ತು. ಇತ್ತೀಚೆಗೆ ಇಲ್ಲಿ ದಾಖಲಿಸಲಾದ ಶಿಶುಗಳ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣವಲ್ಲ ಎಂದು ಹೇಳಿತ್ತು.
ಆಸ್ಪತ್ರೆಯ ಪರಿಸ್ಥಿತಿ ಅವಲೋಕಿಸಲು ಕೇಂದ್ರ ಸರಕಾರದ ತಂಡ ಶನಿವಾರ ಆಸ್ಪತ್ರೆಗೆ ತಲುಪಿದೆ. ಸರಕಾರದ ವರದಿ ಪ್ರಕಾರ ಕಳೆದ ವರ್ಷ ಡಿಸೆಂಬರ್‌ನಿಂದ ಇಲ್ಲಿಯ ವರೆಗೆ ಈ ಆಸ್ಪತ್ರೆಯಲ್ಲಿ 91 ಶಿಶುಗಳು ಸಾವನ್ನಪ್ಪಿವೆ. ಈ ನಡುವೆ ಈ ಸಮಸ್ಯೆ ಪರಿಹರಿಸಲು ಕೈಗೊಂಡ ಕ್ರಮಗಳ ಬಗ್ಗೆ 4 ವಾರಗಳ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೋಟಿಸು ಜಾರಿ ಮಾಡಿತ್ತು.