80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಷಿಪ್
ಅಗ್ರಸ್ಥಾನ ಉಳಿಸಿಕೊಂಡ ಮಂಗಳೂರು ವಿವಿ

ಮೂಡುಬಿದಿರೆ: ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ನ ಮೂರನೇ ದಿನವಾದ ಶನಿವಾರ ಮಹಿಳೆಯರ ವಿಭಾಗದ 20 ಕಿ.ಮೀ. ನಡಿಗೆ ಹಾಗೂ 3000 ಮೀ. ಸ್ಟೀಪಲ್ ಚೇಸ್‍ನಲ್ಲಿ ನೂತನ ಕೂಟ ದಾಖಲೆಗಳು ನಿರ್ಮಾಣಗೊಂಡವು.
20ಕಿ.ಮೀ. ನಡಿಗೆ:
20 ಸಾವಿರ ಮೀಟರ್ (20ಕಿ.ಮೀ.) ನಡಿಗೆಯಲ್ಲಿ ಉದಯ್‍ಪುರ್‍ನ ಮೋಹನ್‍ಲಾಲ್ ಸುಖಾದಿಯಾ ವಿವಿಯ ಸೋನಾಲ್ ಸುಖ್‍ವಾಲ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 20ಕಿ.ಮೀ ದೂರವನ್ನು 1ಗಂಟೆ 38ನಿಮಿಷ 40.49 ಸೆಕೆಂಡ್‍ಗಳಲ್ಲಿ ಕ್ರಮಿಸಿ ಮಹರ್ಷಿ ದಯಾನಂದ ವಿವಿಯ ಎಮ್ ಆರ್ ರವೀನ(1ಗಂಟೆ 43ನಿಮಿಷ 58.64ಸೆಕೆಂಡ್) ಅವರ ಹೆಸರಿನಲ್ಲಿದ್ದ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಬಾರಿಯ ಪ್ರಥಮ ನಾಲ್ಕು ಸ್ಥಾನ ಪಡೆದ ಕ್ರೀಡಾಪಟುಗಳು ಕಳೆದ ಬಾರಿಯ ಕೂಟ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸ್ಟೀಪಲ್ ಚೇಸ್ ದಾಖಲೆ
ಮಹಿಳೆಯರ ವಿಭಾಗದ 3000 ಮೀ. ಸ್ಟೀಪಲ್ ಚೇಸ್‍ನಲ್ಲಿ ಪುಣೆಯ ಸಾವಿತ್ರಿ ಬಾಯಿ ಪುಲೆ ವಿವಿಯ ಕೋಮಲ್ ಜಗದಾಲೆ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 10ನಿ 23.658ಸೆಂಕಡ್‍ಗಳಲ್ಲಿ ಚೇಸ್ ಮಾಡಿ ಮಂಗಳೂರು ವಿವಿಯ ಭಗತ್ ಶೀತಲ್ ಜಾಮಜಿ (10ನಿಮಿಷ 34.53ಸೆಂಕೆಡ್) ಅವರ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಮೆಹಬೂಬ್‍ನಗರದ ಪಲಿಮೂರ್ ವಿವಿ ಜಿ ಮಹೇಶ್ವರಿ 10ನಿ 54.961ಸೆಂಕೆಡ್ ಕ್ರಮಿಸಿ ಬೆಳ್ಳಿಯ ಪದಕ ಹಾಗೂ ಮಂಗಳೂರು ವಿವಿಯ ಜ್ಯೋತಿ ಜಗ್‍ಬಹುದ್ಧೂರ್ ಚೌಹಾರ್ 11ನಿ 3.246 ಸೆಂಕೆಡ್ ಕ್ರಮಿಸುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ.
ದಾಖಲೆ ಮುರಿದರೂ ನಾಲ್ಕನೇ ಸ್ಥಾನ !
ಶನಿವಾರದ ಕ್ರೀಡಾಕೂಟಕ್ಕೆ ನಾಂದಿ ಹಾಡಿದ ಮಹಿಳೆಯರ ವಿಭಾಗದ 20.ಕಿ.ಮೀ ನಡಿಗೆ ವಿಶೇಷತೆಗೆ ಸಾಕ್ಷಿಯಾಯಿತು. ಇದರಲ್ಲಿ ಈ ಹಿಂದೆ ಕೂಟ ದಾಖಲೆ ಹೊಂದಿದ್ದ ಮಹರ್ಷಿ ದಯಾನಂದ ವಿವಿಯ ಎಂ ಆರ್ ರವೀನ(1ಗಂಟೆ 43ನಿಮಿಷ 58.64ಸೆಕೆಂಡ್) ಈ ಬಾರಿ (1ಗಂಟೆ 43ನಿಮಿಷ 27.74ಸೆಕೆಂಡ್) ತಮ್ಮ ದಾಖಲೆಯನ್ನು ಸರಿಗಟ್ಟಿರಾದರೂ ನಾಲ್ಕನೇ ಸ್ಥಾನ ಪಡೆಯುವಂತಾಯಿತು. ಇವರೊಟ್ಟಿಗೆ ಮೊದಲ ಮೂರು ಸ್ಥಾನ ಪಡೆದ ಕ್ರೀಡಾಪಟುಗಳು ಹಿಂದಿನ ಕೂಟ ದಾಖಲೆಯನ್ನು ಮುರಿದ ಕೀರ್ತಿಗೆ ಭಾಜನರಾದರು.
ದ್ವಿತೀಯ ಸ್ಥಾನ ಕಸಿದ ಮದ್ರಾಸ್
ಮೂರನೇ ದಿನದ ಅಂತ್ಯಕ್ಕೆ 86 ಅಂಕಗಳೊಂದಿಗೆ ಮಂಗಳೂರು ವಿವಿ ಕೂಟದಲ್ಲಿ ಅಗ್ರಸ್ಥಾನ ಪಡೆದಿದ್ದು, ಮದ್ರಾಸ್ ವಿವಿಯು 45 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹರ್ಯಾಣದ ಮಹರ್ಷಿ ದಯಾನಂದ ವಿವಿಯು 29 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನಿನ್ನೆ ದಿನದ ಅಂತ್ಯಕ್ಕೆ ಮದ್ರಾಸ್ ವಿವಿ ಹಾಗೂ ಹರ್ಯಾಣದ ಮಹರ್ಷಿ ದಯಾನಂದ ವಿವಿಯು 28 ಅಂಕಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದವು.
ಕಳೆದ ವರ್ಷ ತೀವ್ರ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕಾರಣ ಕಂಚಿನ ಪದಕ ಪಡೆದುಕೊಂಡಿದ್ದೆ. ಆದರೆ ಈ ಬಾರಿ ಕಠಿಣ ಪರಿಶ್ರಮ, ನಿರ್ಧಿಷ್ಟ ಗುರಿ ಹೊಂದಿದ ಕಾರಣ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದೇನೆ.
- ಕೋಮಲ್ ಜಗದಾಲೆ, ಸಾವಿತ್ರಿ ಬಾಯಿ ಪುಲೆ ವಿವಿ, 3000 ಮೀ. ಸ್ಟೀಪಲ್ ಚೇಸ್ ಕೂಟ ದಾಖಲೆ ವಿಜೇತೆ







