ಹೈಕೋರ್ಟ್‌ನಲ್ಲಿ ಸಮಗ್ರ ಕನ್ನಡ ಅನುಷ್ಠಾನವಾಗಲಿ: ಸಿಎಂ ಯಡಿಯೂರಪ್ಪ

ಬೆಂಗಳೂರು, ಜ.4: ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವಾದ ಮಂಡನೆ ಮತ್ತು ತೀರ್ಪು ನೀಡಬೇಕು ಹಾಗೂ ಹೈಕೋರ್ಟ್‌ನಲ್ಲಿ ಸಮಗ್ರವಾಗಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ನ್ಯಾಯಾಧೀಶರು, ಸರಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2017-18 ಮತ್ತು 18-19ನೇ ಸಾಲಿನ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನ್ಯಾಯಾಲಯಗಳ ನ್ಯಾಯಾಧೀಶರು ಕನ್ನಡ ಭಾಷೆಯನ್ನು ಕಲಿತುಕೊಳ್ಳಬೇಕು. ಆಗ ಸುಲಭವಾಗಿ ಕನ್ನಡದಲ್ಲೇ ತೀರ್ಪು ನೀಡಲು ಸಾಧ್ಯ. ಆಂಗ್ಲ ಭಾಷೆಯಲ್ಲಿ ತೀರ್ಪು ಹೊರಬಿದ್ದಾಗ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ, ನ್ಯಾಯದಾನ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಜನಸಾಮಾನ್ಯ ತಿಳಿದುಕೊಳ್ಳಲು ಸುಲಭವಾಗುವುದಿಲ್ಲ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಅಸ್ಮಿತೆಯನ್ನು ಕಾಪಾಡುವ ಸಾರ್ಥಕ ಕೆಲಸ ಮಾಡುತ್ತಾ ಬಂದಿದೆ. ಆಡಳಿತದಲ್ಲಿ ಕನ್ನಡ ಭಾಷೆ ತರುವ ಉದ್ದೇಶದಿಂದ ಆಡಳಿತ ಸುಧಾರಣೆ, ರಚನಾತ್ಮಕ ಸ್ವರೂಪ ನೀಡುವ ದಿಕ್ಕಿನತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಆಡಳಿತದಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಬಳಸಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಗಡಿಭಾಗದ ಕನ್ನಡಿಗರ ಸುಧಾರಣೆ, ನ್ಯಾಯಾಂಗದಲ್ಲಿ ಕನ್ನಡ, ಆಡಳಿತದಲ್ಲಿ ಕನ್ನಡ, ಹೊರನಾಡ ಕನ್ನಡಿಗರ ಸಮಾವೇಶ ಸೇರಿದಂತೆ ಕನ್ನಡದ ಪರವಾಗಿನ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಕನ್ನಡವನ್ನು ಜನರ ಜೀವದ ಭಾಷೆಯನ್ನಾಗಿಸಲು ಸರಕಾರ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಅದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾಥ್ ನೀಡಿದೆ ಎಂದು ತಿಳಿಸಿದರು.
ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾತನಾಡಿ, ಕನ್ನಡದಲ್ಲಿಯೇ ತೀರ್ಪು ನೀಡಲು ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಜಿಲ್ಲಾ, ಸತ್ರ, ಹೈಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳಲ್ಲಿ ಶೀಘ್ರ ಲಿಪಿಕಾರರು ಹಾಗೂ ಬೆರಳಚ್ಚುಗಾರರ ಕೊರತೆ ಇದೆ. ಬಹಳ ಸಂದರ್ಭದಲ್ಲಿ ಕನ್ನಡದಲ್ಲಿಯೇ ತೀರ್ಪು ನೀಡಿದರೂ, ಅದನ್ನು ಬರೆದುಕೊಳ್ಳಲು ಶೀಘ್ರ ಲಿಪಿಗಾರರಿಲ್ಲ ಎಂದು ನುಡಿದರು.
ಶೀಘ್ರಲಿಪಿ ತರಬೇತಿ ಕೇಂದ್ರಗಳು ಮುಚ್ಚಿರುವುದರಿಂದ ಹುದ್ದೆಗಳ ಭರ್ತಿಗೆ ನ್ಯಾಯಾಲಯ ಅಧಿಸೂಚನೆ ಹೊರಡಿಸಿದರೂ, ಅರ್ಜಿಗಳು ಬರುತ್ತಿಲ್ಲ. ಹೀಗಾಗಿ, ಸರಕಾರವೇ ಶೀಘ್ರಲಿಪಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸುಪ್ರೀಂಕೋರ್ಟ್ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಂದು ಒಪ್ಪಿಕೊಂಡಿರುವುದರಿಂದ ಕೆಲವು ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲಿಯೇ ತೀರ್ಪು ನೀಡುವುದು ಅನಿವಾರ್ಯವಾಗಿದೆ. ಎಷ್ಟೋ ಬಾರಿ ನಾವು ನೀಡಿದ ತೀರ್ಪುಗಳು ಕಕ್ಷಿದಾರರಿಗೂ ತಿಳಿಯುವುದಿಲ್ಲ. ಅದನ್ನು ವಕೀಲರು ಅರ್ಥೈಸಿಕೊಂಡು ವಿವರಿಸಲು ಸಾಕಷ್ಟು ಸಮಯಬೇಕು. ಅರ್ಥವಾಗುವ ಭಾಷೆಯಲ್ಲಿ ತೀರ್ಪು ನೀಡಿದರೆ ಇಂತಹ ತಾಪತ್ರಯ ಉಂಟಾಗುವುದಿಲ್ಲ ಎಂದರು.
ಸಮಾರಂಭದಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 72 ಮಂದಿ ನ್ಯಾಯಾಧೀಶರು, 10 ಮಂದಿ ಸರಕಾರಿ ಅಭಿಯೋಜಕರು, 20 ಮಂದಿ ವಕೀಲರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಅಭಿನಂದನಾ ಪತ್ರ ಒಳಗೊಂಡಿದೆ. ಈ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ, ಸಿ.ಟಿ.ರವಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸೇರಿದಂತೆ ಹಲವರಿದ್ದರು.
ನಮ್ಮ ರಾಜ್ಯದಲ್ಲಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಸಿಗಬೇಕಾದ ಅನೇಕ ಉದ್ಯೋಗಗಳು ಬೇರೆಯವರ ಪಾಲಾಗುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಕನ್ನಡದಲ್ಲಿ ಬಿಟ್ಟು, ಬೇರೆ ಬೇರೆ ಭಾಷೆಯಲ್ಲಿ ವ್ಯವಹರಿಸುತ್ತಿರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ನಿಯಮ ರೂಪಿಸುವ ಚಿಂತನೆಯಿದೆ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ







