ಬಂಟ್ವಾಳ ಬಂಟರ ಸಂಘದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ

ಬಂಟ್ವಾಳ, ಜ. 4: ದೇಶದಲ್ಲಿ ಪ್ರತೀ ವ್ಯಕ್ತಿ ಹುಟ್ಟುವಾಗ ಮಾನವೀಯತೆ ಇರದಿದ್ದರೂ ಆತನಿಗೆ ಶಾಲೆ ಮತ್ತು ಮನೆಯಲ್ಲಿ ನೀಡುವ ಸಂಸ್ಕಾರದಿಂದ ಮಾನವೀಯತೆ ಬರುತ್ತದೆ. ಮನುಷ್ಯನಲ್ಲಿ ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ಗುಣ ಇದ್ದಾಗ ಭ್ರಷ್ಟಾಚಾರ ಮತ್ತು ಕ್ರೌರ್ಯತೆ ಇರಲು ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ತಾಲೂಕಿನ ಬಂಟರ ಸಂಘದ ವತಿಯಿಂದ ತುಂಬೆ ಸಮೀಪದ ವಳವೂರು ಬಂಟವಾಳದ ಬಂಟರ ಭವನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಮಂತ ಮತ್ತು ಅಧಿಕಾರ ಉಳ್ಳ ಬಲಿಷ್ಟ ವ್ಯಕ್ತಿಯನ್ನು ಆರಾಧಿಸುವ ಸಂಸ್ಕೃತಿ ಬೆಳೆಯುತ್ತಿದ್ದು, ಜೈಲಿನಿಂದ ಹೊರ ಬರುವ ವ್ಯಕ್ತಿಯನ್ನು ಸಮಾಜದಿಂದ ದೂರ ಇಡುವ ಬದಲಾಗಿ ಆತನಿಗೆ ವಿಮಾನ ನಿಲ್ದಾಣದಿಂದಲೇ ಮೆರವಣಿಗೆ ಮಾಡಿ ಸನ್ಮಾನಿಸುವ ಪ್ರವೃತ್ತಿ ಖಂಡನೀಯ. ನಾನು ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿಗೊಂಡ ಬಳಿಕ ಸುಮಾರು 5 ಸಾವಿರಕ್ಕೂ ಮಿಕ್ಕಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಬಾಲ್ಯದಿಂದಲೇ ತೃಪ್ತಿ ಮತ್ತು ಮಾನವೀಯತೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.
ಇದೇ ವೇಳೆ ಅಂತರ್ ರಾಷ್ಟ್ರೀಯ ಮಟ್ಟದ ಸಾಧಕ ಉದ್ಯಮಿ ಶಶಿಕಿರಣ್ ಶೆಟ್ಟಿ ಮತ್ತು ಆರತಿ ಶಶಿಕಿರಣ್ ಶೆಟ್ಟಿ ದಂಪತಿಗೆ ಸನ್ಮಾನ, ತುಳು ಸಾಹಿತ್ಯ ಆಕಾಡೆಮಿ ಮಾಜಿ ಸದಸ್ಯೆ, ಶಿಕ್ಷಕಿ ವಿಜಯಾ ಶೆಟ್ಟಿ ಸಾಲೆತ್ತೂರು ಇವರಿಗೆ ಏರ್ಯ ಸ್ಮೃತಿ ಪ್ರಶಸ್ತಿ ಪ್ರದಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವರದಕ್ಷಿಣೆ ರಹಿತ ಮದುವೆಗೆ ಪ್ರೋತ್ಸಾಹದ ಜೊತೆಗೆ ಶಿಕ್ಷಣ, ಸ್ವ ಉದ್ಯೋಗ, ವಸತಿ ಸೌಲಭ್ಯ ನೀಡಲು ಶ್ರಮಿಸುತ್ತಿದೆ ಎಂದರು. ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಶುಭ ಹಾರೈಸಿದರು. ಏರ್ಯಬೀಡು ಆನಂದಿ ಎಲ್.ಆಳ್ವ, ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ ಶೆಟ್ಟಿ ಇರಾಗುತ್ತು, ಜೊತೆ ಕಾರ್ಯದರ್ಶಿ ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು, ಮಹಿಳಾ ಘಟಕ ಅಧ್ಯಕ್ಷೆ ಆಶಾ ಪಿ.ರೈ, ಪ್ರಮುಖರಾದ ಡಾ.ಆತ್ಮರಂಜನ್ ರೈ, ಶಶಿರಾಜ್ ಶೆಟ್ಟಿ ಕೊಳಂಬೆ, ಶ್ರೀಕಾಂತ್ ಶೆಟ್ಟಿ, ಕೆ.ಪದ್ಮನಾಭ ರೈ, ಎಂ.ದುರ್ಗಾದಾಸ ಶೆಟ್ಟಿ, ರಮಾ ಎಸ್.ಭಂಡಾರಿ ಮತ್ತಿತರರು ಇದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ನಿರ್ದೇಶಕ ಗುರುಕಿರಣ್ ಇವರಿಂದ ಸಂಗೀತ ಮತ್ತು ವಿವಿಧ ವಲಯ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







