ಜ.5ರಂದು ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆ: ಕುಮಾರಕೃಪಾ ರಸ್ತೆಯಲ್ಲಿ ಸಂಚಾರ ನಿಷೇಧ
ಬೆಂಗಳೂರು, ಜ.4: ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ನಾಳೆ(ಜ.5)ರಂದು ಚಿತ್ರಸಂತೆ ಆಯೋಜಿಸಿರುವುದರಿಂದ ಕುಮಾರಕೃಪಾ ರಸ್ತೆಯಲ್ಲಿ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಚಿತ್ರಸಂತೆಯ ಪ್ರಯುಕ್ತ ಚಿತ್ರಕಲಾ ಪರಿಷತ್‌ನ ಆವರಣ, ಕುಮಾರಕೃಪಾ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಚಿತ್ರಸಂತೆಗೆ ಲಕ್ಷಾಂತರ ಮಂದಿ ಕಲಾಸಕ್ತರು ಆಗಮಿಸುವ ನಿರೀಕ್ಷೆಯ ಇರುವುದರಿಂದ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಿ, ಪರ್ಯಾಯ ಮಾರ್ಗದಲ್ಲಿ ಅವಕಾಶ ಕಲ್ಪಿಸಲಾಗಿದೆ.
ವಾಹನಗಳ ಮಾರ್ಗ ಬದಲಾವಣೆ: ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನ ಸಂಚಾರವನ್ನು ರೇಸ್ ವ್ಯೆ ಜಂಕ್ಷನ್ ಮೂಲಕ ಕೆಕೆ ರಸ್ತೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್-ಬಸವೇಶ್ವರ ವೃತ್ತ-ಹಳೇ ಹೈಗ್ರೌಂಡ್ಸ್ ಜಂಕ್ಷನ್-ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಮುಂದೆ ಸಾಗಬಹುದಾಗಿದೆ.
ಟಿ.ಚೌಡಯ್ಯ ರಸ್ತೆಯಿಂದ ಬಂದು ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕೆಕೆ ರಸ್ತೆ ಪ್ರವೇಶಿಸುವ ವಾಹನಗಳನ್ನು ವಿಂಡ್ಸರ್ ಮ್ಯಾನರ್ ಬಳಿ ನಿರ್ಬಂಧಿಸಿದ್ದು, ಸದರಿ ವಾಹನಗಳು ಟಿ.ಚೌಡಯ್ಯ ರಸ್ತೆ-ಹಳೇ ಹೈಗ್ರೌಂಡ್ಸ್ ಜಂಕ್ಷನ್-ಎಲ್ಆರ್ಡಿಇ- ಬಸವೇಶ್ವರ ವೃತ್ತ-ರೇಸ್ ಕೋರ್ಸ್ ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ.
ವಾಹನಗಳ ನಿಲುಗಡೆ ಸ್ಥಳ: ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನಗಳು, ಕ್ರೆಸೆಂಟ್ ರಸ್ತೆಯಲ್ಲಿ ಗುರುರಾಜ ಕಲ್ಯಾಣ ಕಲ್ಯಾಣಮಂಟಪದಿಂದ ಹೊಟೇಲ್ ಜನಾರ್ದನವರೆಗೆ ರಸ್ತೆಯ ಪಶ್ಚಿಮಕ್ಕೆ ನಾಲ್ಕು ಚಕ್ರವಾಹನಗಳು ಹಾಗೂ ಸರಕಾರಿ ವಸತಿ ಗೃಹ, ಕ್ರೆಸೆಂಟ್ ರಸ್ತೆ ಇಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ರಸ್ತೆಯ ಪೂರ್ವ ಭಾಗಕ್ಕೆ ನಾಲ್ಕು ಚಕ್ರವಾಹನಗಳು, ಸೇವಾದಳ ಶಾಲೆ ಆವರಣ, ಕ್ರೆಸೆಂಟ್ ಕ್ರಾಸ್ ರಸ್ತೆ ಹಾಗೂ ಬಿಡಿಎ ಆವರಣ ನಿಲುಗಡೆ ಸ್ಥಳದಲ್ಲಿ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಿ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದರು.
ಮನವಿ: ವಾಹನಗಳ ನಿಲುಗಡೆಗೆ ಕೆಕೆರಸ್ತೆಯ ಸುತ್ತಮುತ್ತ ಸ್ಥಳಾವಕಾಶ ಕೊರತೆ ಇರುವುದರಿಂದ ಕಾರ್ಯಕ್ರಮಕ್ಕೆ ಬರುವವರು ಸಾರ್ವಜನಿಕರಿಗೆ ಸಾರಿಗೆ ಸಂಪರ್ಕವನ್ನು ಬಳಸುವಂತೆ ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.







