ಕುಸ್ತಿ ಟ್ರಯಲ್ಸ್: ಸಾಕ್ಷಿ ಮಲಿಕ್‌ಗೆ ಸೋನಂ ಮಲಿಕ್ ಶಾಕ್
ಲಕ್ನೋ, ಜ.4: ಎರಡು ಬಾರಿಯ ವರ್ಲ್ಡ್ ಕೆಡೆಟ್ ಚಾಂಪಿಯನ್ ಸೋನಂ ಮಲಿಕ್ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ಗೆ 62 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಶಾಕ್ ನೀಡಿದರೆ, ಇನ್ನೋರ್ವ ಭರವಸೆಯ ಜೂನಿಯರ್ ಕುಸ್ತಿಪಟು ಅನ್ಶು ಮಲಿಕ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತೆ ಪೂಜಾ ಧಾಂಡಾರನ್ನು 57 ಕೆಜಿ ವಿಭಾಗದಲ್ಲಿ ಸೋಲಿಸುವುದರೊಂದಿಗೆ ಏಶ್ಯನ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
4-6 ಹಿನ್ನಡೆಯಿಂದ ಚೇತರಿಸಿಕೊಂಡ ಸೋನಂ ಕೊನೆಯ ಕ್ಷಣದಲ್ಲಿ ಜಯ ಸಾಧಿಸಿದರು. ಫೈನಲ್‌ನಲ್ಲಿ ರಾಧಿಕಾರನ್ನು 4-1 ಅಂತರದಿಂದ ಮಣಿಸಿ 62 ಕೆಜಿ ವಿಭಾಗದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹರ್ಯಾಣದ ಸೊನೆಪತ್‌ನ ಮದಿನಾ ಎಂಬ ಸಣ್ಣ ಹಳ್ಳಿಯಿಂದ ಬಂದಿರುವ ಸೋನಂ ಗೊಹಾನದ ಅಜ್ಮೆರ್ ಮಲಿಕ್ ಕೋಚಿಂಗ್ ನೀಡಿದ್ದಾರೆ. ವಿನೇಶ್ ಫೋಗಟ್(53ಕೆಜಿ), ಹಾಗೂ ದಿವ್ಯಾ ಕಕ್ರಾನ್(68ಕೆಜಿ)ಇತರ ತೂಕ ವಿಭಾಗಗಳಲ್ಲಿ ಸುಲಭ ಜಯ ಸಾಧಿಸಿದರು.
ನಿರ್ಮಲಾ ದೇವಿ(50ಕೆಜಿ) ಹಾಗೂ ಕಿರಣ್ ಗೊದಾರ(76ಕೆಜಿ)ಟ್ರಯಲ್ಸ್ ಜಯ ಸಾಧಿಸಿದರು. ವಿಜೇತರು ರೋಮ್‌ನಲ್ಲಿ ಜ.15ರಿಂದ 18ರ ತನಕ ನಡೆಯುವ ಮೊದಲ ರ್ಯಾಂಕಿಂಗ್ ಸರಣಿಯಲ್ಲಿ ಹೊಸದಿಲ್ಲಿಯಲ್ಲಿ ಫೆ.18ರಿಂದ 23ರ ತನಕ ನಡೆಯುವ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ.





