ಆಸ್ಟ್ರೇಲಿಯಾದ ಭೀಕರ ಕಾಡ್ಗಿಚ್ಚು: ಸಂತ್ರಸ್ತರಿಗೆ ಉಚಿತ ಆಹಾರ ನೀಡುತ್ತಿರುವ ಭಾರತದ ದಂಪತಿ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಭಾರೀ ಕಾಡ್ಗಿಚ್ಚಿನಿಂದ ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರೆ, ಹಲವರು ಸಾವನ್ನಪ್ಪಿದ್ದಾರೆ. ವರದಿಯೊಂದರ ಪ್ರಕಾರ ಈ ಭೀಕರ ಕಾಡ್ಗಿಚ್ಚಿನಿಂದ 48 ಕೋಟಿ ಪ್ರಾಣಿಗಳು ಸಾವನ್ನಪ್ಪಿವೆ. ಈ ನಡುವೆ ಕಾಡ್ಗಿಚ್ಚಿನ ಸಂತ್ರಸ್ತರಿಗೆ ತಮ್ಮ ರೆಸ್ಟೋರೆಂಟ್ ನಿಂದ ಉಚಿತ ಆಹಾರಗಳನ್ನು ನೀಡುವ ಮೂಲಕ ಭಾರತದ ದಂಪತಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಬೇರ್ನ್ಸ್ ಡೇಲ್ ನಲ್ಲಿರುವ ದೇಸಿ ಗ್ರಿಲ್ ರೆಸ್ಟೋರೆಂಟ್ ನಲ್ಲಿ ತಯಾರಿಸಿದ ಸರಳ ಆಹಾರವನ್ನು ಕಮಲ್ಜೀತ್ ಕೌರ್ ಮತ್ತು ಕನ್ವಲ್ ಜೀತ್ ಕೌರ್ ದಂಪತಿ ಕಾಡ್ಗಿಚ್ಚು ಸಂತ್ರಸ್ತರಿಗೆ 5 ದಿನಗಳಿಂದ ಹಂಚುತ್ತಿದ್ದಾರೆ.
"ನಾವು ಅನ್ನ ಮತ್ತು ಸಾರನ್ನು ನೀಡುತ್ತಿದ್ದೇವೆ. ಸಂತ್ರಸ್ತರ ಶಿಬಿರದಲ್ಲಿ ನಾವು ಆಹಾರ ಹಂಚುತ್ತಿದ್ದೇವೆ ಮತ್ತು ರೆಸ್ಟೋರೆಂಟ್ ಗೆ ಬರುವವರಿಗೂ ಆಹಾರ ನೀಡುತ್ತಿದ್ದೇವೆ. ಈಗ ಇಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿದೆ. ಮೊದಲು ಇಲ್ಲಿ ಸ್ವಲ್ಪ ಬೆಂಕಿ ಇತ್ತು. ಆದರೆ ಇದು ಎಲ್ಲೆಡೆ ಹರಡಿದೆ. ಜನರು ತಮ್ಮ ಬದುಕನ್ನು, ಮನೆಗಳನ್ನು, ಕೃಷಿಯನ್ನು ಮತ್ತು ಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ" ಎಂದವರು ಹೇಳಿದರು.





