ಬಂಟ್ವಾಳ : ಪುಣ್ಕೆದಡಿ ಶಾಲೆಯಲ್ಲಿ ಎಂಟೇ ವಿದ್ಯಾರ್ಥಿಗಳು !

ಬಂಟ್ವಾಳ, ಜ. 4: ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಪುಣ್ಕೆದಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಬೆರಳಣಿಕೆಯಷ್ಟು ಮಕ್ಕಳು ಮಾತ್ರ ದಾಖಲಾಗಿದ್ದು, ಮುಚ್ಚುವ ಭೀತಿ ಎದುರಾಗಿದೆ.
ಒಂದನೇ ತರಗತಿಯಲ್ಲಿ ಒಂದು, ಎರಡನೇ ತರಗತಿಯಲ್ಲಿ ಎರಡು, ಮೂರನೇ ತರಗತಿಯಲ್ಲಿ ಮೂರು, ನಾಲ್ಕನೇ ತರಗತಿಯಲ್ಲಿ ಯಾರೂ ಇಲ್ಲ. ಐದನೇ ತರಗತಿಯಲ್ಲಿ ಇಬ್ಬರು ಮಕ್ಕಳಿದ್ದು, ವರ್ಷ ಕಳೆದಂತೆ ಈ ಶಾಲೆಯೂ ಮಕ್ಕಳಿಲ್ಲದೆ ಸೊರಗುತ್ತಿದೆ.
1991ರಂದು ಆರಂಭವಾದ ಶಾಲೆಗೆ ಊರವರ ಶ್ರಮದಾನ, ಶಾಲಾ ಅಭಿವೃದ್ಧಿ ಸಮಿತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಾ ಬರುಯುತ್ತಿದ್ದರೂ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಈ ಶಾಲೆಯ 1 ಕಿಲೋ ಮೀಟರ್ ದೂರದಲ್ಲಿ ಒಂದು, ಮತ್ತೆರಡು ಕಿಲೋ ಮೀಟರ್ ದೂರದಲ್ಲಿ ಇನ್ನೊಂದು ಶಾಲೆಯಿರುವುದು ಒಂದು ಕಾರಣವಾದರೆ, ಪುಣ್ಕೆದಡಿ ಊರಿನಲ್ಲಿ ಮಕ್ಕಳೇ ಸಂಖ್ಯೆ ಕಡಿಮೆಯಿರುವುದು ಇನ್ನೊಂದು ಕಾರಣ.
ಬಸ್ ಸಂಚಾರವಿಲ್ಲ
ಈಗ ಬರುವ ಎಂಟು ವಿದ್ಯಾರ್ಥಿಗಳೂ ತೀರಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದು, ಸುಮಾರು 2 ಕಿ.ಮೀ. ದೂರದಿಂದ ನಡೆದುಕೊಂಡೇ ಬರುತ್ತಾರೆ. ಈ ಶಾಲೆಗೆ ರಸ್ತೆ ಮಾರ್ಗವಿದ್ದರೂ ಇಲ್ಲಿನ ಸಮೀಪದ ಅಗರಗುಂಡಿವರೆಗೆ ಮಾತ್ರ ಬಸ್ ಬರುತ್ತವೆ. ಬಳಿಕ ಇಲ್ಲಿಂದ ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ. ಈ ಕಾರಣದಿಂದಲೇ ಶಿಕ್ಷಕರೂ ಕೂಡಾ ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದಾರೆ. ಶಾಲೆಯಲ್ಲಿನ ಕೊಠಡಿಗಳ ನೆಲಕ್ಕೆ ಟೈಲ್ಸ್ ಹಾಕಲಾಗಿದ್ದು, ಕೆಲವೊಂದು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಬೇರೆ ಸರಕಾರಿ ಶಾಲೆಗಳಿಗೆ ಹೋಲಿಸಿದರೆ ಬಸ್ ಸೌಕರ್ಯ ಒಂದನ್ನು ಬಿಟ್ಟು ಯಾವುದೇ ಕೊರತೆ ಇಲ್ಲ.
ಈ ಊರಿನಲ್ಲಿ ಮಕ್ಕಳ ಸಂಖ್ಯೆಯು ತೀರಾ ಕಡಿಮೆ. ಶಾಲೆಗೆ ಬಸ್ ಸಂಚಾರವಿಲ್ಲದಿರುವುದರಿಂದ ವಿದ್ಯಾರ್ಥಿಗಳು ಸುಮಾರು 2 ಕಿ.ಮೀ. ದೂರದಿಂದಲೇ ನಡೆದುಕೊಂಡು ಬರುವ ಪರಿಸ್ಥಿತಿ. ಶಾಲೆಗೆ ಮಕ್ಕಳನ್ನು ಹೆಚ್ಚಿಸಲು, ವಾಹನದ ವ್ಯವಸ್ಥೆ ಕಲ್ಪಿಸಲು ಎಸ್‌ಡಿಎಂಸಿ ಸಮಿತಿಯಲ್ಲಿ ಅನುಕೂಲಸ್ಥರಿಲ್ಲ.
-ರಫೀಕ್, ಎಸ್‌ಡಿಎಂಸಿ ಅಧ್ಯಕ್ಷರು,
ಒಂದು ವೇಳೆ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾದರೆ ಪುಣ್ಕೆದಡಿ ಸರಕಾರಿ ಶಾಲೆಗೆ ಹತ್ತಿರದ ಶಾಲೆಯ ವಿದ್ಯಾರ್ಥಿಗಳನ್ನು ಕಳುಹಿಸಿ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು. ಹೀಗಿರುವಾಗ ಶಾಲೆ ಮುಚ್ಚುವ ಪ್ರಶ್ನೆಯೇ ಬರಲ್ಲ.
-ಜ್ಞಾನೇಶ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ







