ಚಿತ್ರಸಂತೆಗೆ 1 ಕೋಟಿ ರೂ.ಅನುದಾನ ಮೀಸಲು: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಜ.5: ಮುಂದಿನ ಬಜೆಟ್‌ನಲ್ಲಿ ಚಿತ್ರಸಂತೆಗಾಗಿ ಪ್ರತಿವರ್ಷ ಒಂದು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರವಿವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ 17 ನೇ ಚಿತ್ರಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರನ್ನು ಪ್ರೋತ್ಸಾಹಿಸಲು ನಮ್ಮ ಸರಕಾರ ಬದ್ಧವಾಗಿದೆ. ದೇಶ-ವಿದೇಶಗಳಿಂದ ಕಲಾವಿದರನ್ನು ಆಕರ್ಷಿಸುತ್ತಿರುವ ಚಿತ್ರಸಂತೆಯನ್ನು ಮತ್ತಷ್ಟು ಆಕರ್ಷಯಮಯವಾಗಿಸಲು ಬಜೆಟ್‌ನಲ್ಲಿ ಚಿತ್ರಸಂತೆಗೆ ಹೆಚ್ಚಿನ ಅನುದಾನ ಮೀಸಲಿಡಲಾಗುವುದು ಎಂದರು.
ಸಾರ್ವಜನಿಕರು ಚಿತ್ರಕಲಾವಿದರ ಚಿತ್ರಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಈ ಬಾರಿಯ ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸಿರುವುದು ನನಗೆ ಅಧಿಕ ಸಂತಸ ತಂದಿದೆ. ಮಣಿಪುರ, ಮಿಜೊರಾಂ ಸೇರಿ 18 ರಾಜ್ಯಗಳಿಂದ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ. ಚಿತ್ರಸಂತೆ ಎಲ್ಲರ ಗಮನ ಸೆಳೆಯುತ್ತದೆ. ಚಿತ್ತಾರಗಳು ಚಿತ್ತಗಳನ್ನು ಸೆಳೆಯುತ್ತಿವೆ ಎಂದು ಹೇಳಿದರು.
ಮಧ್ಯವರ್ತಿಗಳ ಕಾಟವಿಲ್ಲದೇ ಕಲೆಯನ್ನು ನೇರಾ ಮಾರಾಟ ಮಾಡುವುದು ಖುಷಿಯ ವಿಚಾರ. ನಾವೆಲ್ಲ ರಸ್ತೆಯಲ್ಲಿರುವ ಚಿತ್ರಗಳನ್ನು ನೋಡಲು ಒಂದು ದಿನ ಸಾಲುವುದಿಲ್ಲ. ದೇಶದಲ್ಲಿಯೇ ಅಪರೂಪದ ಸಂಗತಿ. ಹೀಗಾಗಿ, ಕಲೆ ಮತ್ತು ಕಲಾವಿದರನ್ನು ಉತ್ತೇಜಿಸಲು ರಾಜ್ಯ ಸರಕಾರ ಸದಾ ಪರಿಷತ್ತಿನೊಂದಿಗೆ ಇರುತ್ತದೆ ಎಂದು ಭರವಸೆ ನೀಡಿದರು.
ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿಎಲ್ ಶಂಕರ್ ಮಾತನಾಡಿ, ಸಿಎಂ ಯಡಿಯೂರಪ್ಪ ಉದಾರಿಗಳಾಗಿದ್ದಾರೆ. ಅವರ ಮುಂದೆ ನಾವು ಎರಡು ಬೇಡಿಕೆ ಇಟ್ಟಿದ್ದೆವು, ಪೂರ್ಣಚಂದ್ರ ತೇಜಸ್ವಿ ಹೆಸರಲ್ಲಿ ಜಾಗ ಕೇಳಿದ್ದೆವು. ಅದನ್ನು ಕೊಟ್ಟಿದ್ದಾರೆ. ಈಗ ಬಜೆಟ್ ನಲ್ಲಿ ಚಿತ್ರಸಂತೆಗಾಗಿ ಒಂದು ಕೋಟಿ ಮೀಸಲು ಇರಿಸುವುದಾಗಿ ಹೇಳಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.







