ಅರಣ್ಯ ಅಧಿಕಾರಿಗಳ ಭಡ್ತಿ ಸಮಸ್ಯೆಗೆ ತಿಂಗಳೊಳಗೆ ಪರಿಹಾರ: ಪ್ರಕಾಶ್ ನೆಟಾಲ್ಕರ್

ಉಡುಪಿ, ಜ.5: ಅರಣ್ಯ ಇಲಾಖೆಯ ಅಧಿಕಾರಿಗಳ ಭಡ್ತಿ ಹಾಗೂ ಸಂಬಳ ವ್ಯಾತ್ಯಾಸ ಸಮಸ್ಯೆಗಳನ್ನು ಸರಿಪಡಿಸಲು ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಜ.3ರಂದು ನಡೆದ ಸಮಿತಿ ಸಭೆಯಲ್ಲಿ ತಿಂಗಳೊಳಗೆ ಭಡ್ತಿ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಲಾಗಿದೆ ಎಂದು ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್ ಹೇಳಿದ್ದಾರೆ.
ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಇದರ 20ನೆ ವರ್ಷದ ವಾರ್ಷಿಕ ಸಮಾರಂಭದ ಉದ್ಘಾಟನೆ ಮತ್ತು ನೂತನ ವರ್ಷದ ದಿನಚರಿ ಬಿಡುಗಡೆ ಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು.
ಅರಣ್ಯ ಸಂರಕ್ಷಣೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸವನ್ನು ಇಲಾಖೆಯವರು ಸಕ್ರಿಯವಾಗಿ ಮಾಡುತ್ತಿದ್ದಾರೆ. ಅರಣ್ಯ ಉಳಿಸಿ ಬೆಳೆಸಲು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಯತ್ನ ಮಾಡಬೇಕು. ಇಂದು ಚಿರತೆ ಹಾವಳಿ ಕೂಡ ಜಾಸ್ತಿಯಾಗುತ್ತಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಮಾತನಾಡಿ, ಕಂದಾಯ ಇಲಾಖೆಯ ಭೂಮಿಗಳು ಈಗಾಗಲೇ ಹಂಚಿ ಖಾಲಿಯಾಗಿದೆ. ಈಗ ಉಳಿದಿರುವುದು ಅರಣ್ಯ ಭೂಮಿಗಳು ಮಾತ್ರ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಮತ್ತು ಅದಕ್ಕಾಗಿ ಹೋರಾಟ ಕೂಡ ಮಾಡಬೇಕಾಗಿದೆ ಎಂದು ತಿಳಿಸಿದರು.
ಪ್ರಾಣಿ ಮತ್ತು ಮಾನವರ ನಡುವಿನ ಸಂಘರ್ಷ ಕೂಡ ಜಾಸ್ತಿಯಾಗಿದೆ. ಚಿರತೆಗಳು ಹೆಚ್ಚು ಹೆಚ್ಚು ನಾಡಿಗೆ ಬರುತ್ತಿದೆ. ಇದರಿಂದ ಅರಣ್ಯ ಸಿಬ್ಬಂದಿ ಗಳ ವೃತ್ತಿ ಜೀವನ ಬಹಳಷ್ಟು ಕಷ್ಟಕರ ಆಗಿದೆ. ಫಾರೆಸ್ಟ್ ಸರ್ವೆ ಆಫ್ ಇಂಡಿಯಾದ ವರದಿ ಪ್ರಕಾರ ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಜಾಸ್ತಿ ಯಾಗಿದ್ದು, ಇದಕ್ಕೆ ನಮ್ಮೆಲ್ಲರ ಶ್ರಮವೇ ಕಾರಣ. ಅದೇ ರೀತಿ ಉಡುಪಿ ಜಿಲ್ಲೆ ಯಲ್ಲೂ ಅರಣ್ಯ ಪ್ರದೇಶ ಹೆಚ್ಚಾಗಿರುವುದು ಅದೇ ವರದಿ ತಿಳಿಸುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬೈಕ್ ರ್ಯಾಲಿ ಪಟು ಅರವಿಂದ ಕೆ.ಪಿ., ಸಮಾಜ ಸೇವಕಿ ಕಾಂತಿ ಹರೀಶ್, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ, ರಕ್ತದಾನಿಗಳಿಗೆ ಗೌರವ ಪತ್ರ ಹಾಗೂ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಜೀವನ್‌ದಾಸ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್, ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ನಿವೃತ್ತ ಅರಣ್ಯಾಧಿಕಾರಿ ಯೋಗೇಶ್ವರ್, ಜಗನ್ನಾಥ ಶೆಟ್ಟಿ, ಸಂಘದ ಗೌರವಾಧ್ಯಕ್ಷ ುುಡೂರ ಕೊಠಾರಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ನಾಗೇಶ ಬಿಲ್ಲವ ಸ್ವಾಗತಿಸಿದರು. ಗೌರವ ಸಲಹೆಗಾರ ಪ್ರಕಾಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







