ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ, ಜ.5: ಪುಸ್ತಕಗಳಲ್ಲಿ ಪದಗಳ ರೂಪದಲ್ಲಿ ಇರುವುದು ಕತೆಯಾದರೆ, ಅದಕ್ಕೆ ಅಭಿನಯದ ರೂಪ ನೀಡಿದಾಗ ಅದು ನಾಟಕವಾಗುತ್ತದೆ. ಮನರಂಜನೆ ಗಾಗಿ ಹುಟ್ಟಿಕೊಂಡ ನಾಟಕ, ಕ್ರಮೇಣ ಸಾಮಾಜಿಕ ಪರಿವರ್ತನೆಯ ದಾರಿ ಯಾಯಿತು ಎಂದು ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಹೇಳಿದ್ದಾರೆ.
ಉಡುಪಿ ರಂಗಭೂಮಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರವಿವಾರ ನಡೆದ 40ನೆ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಕಲಾಂಜಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಭಾಷೆ ಎಂಬುದು ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಪದಗಳಾಗಿವೆ. ಈ ಪದಗಳಿಂದ ಕತೆಗಳು ಸೃಷ್ಠಿಯಾಗಿವೆ. ಕೇವಲ ಪದಗಳಿಂದ ಮಾತ್ರ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ ಅದಕ್ಕೆ ಅಭಿನಯ ರೂಪ ನೀಡಲಾಯಿತು. ಅದುವೇ ನಾಟಕಗಳಾಗಿ ಹುಟ್ಟಿಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ನಾಟಕಗಳು ಯಾವಾಗ ಹುಟ್ಟಿಕೊಂಡಿತು ಎಂಬುದಕ್ಕೆ ಯಾವುದೇ ದಾಖಲೆ ಗಳು ಇಲ್ಲ. ಭಾರತದಲ್ಲಿ ಕ್ರಿ.ಪೂ.100-200ರಲ್ಲಿ ನಾಟಕ ಆರಂಭವಾಯಿತು ಎಂದು ಹೇಳಲಾಗುತ್ತದೆ ಎಂದ ಅವರು, ನಾಟಕದಲ್ಲಿ ಪಾತ್ರ ಮತ್ತು ವಿಷಯ ವನ್ನು ವ್ಯಕ್ತಪಡಿಸುವುದು ಬಹಳ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿ ದ್ದರು. ಹಿರಿಯ ರಂಗ ಕಲಾವಿದ ಶ್ರೀನಿವಾಸ ಶೆಟ್ಟಿಗಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸ ಲಾಯಿತು.
ರಂಗಭೂಮಿ ಉಪಾಧ್ಯಕ್ಷ ನಂದ ಕುಮಾರ್ ಎಂ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಥಮ ಪ್ರಶಸ್ತಿ ವಿಜೇತ, ಬೆಂಗಳೂರು ಸಮಷ್ಠಿ ತಂಡದ ನಾಟಕ ‘ನೀರು ಕುಡಿಸಿದ ನೀರೆಯರು’ ಮರುಪ್ರದರ್ಶನ ಕಂಡಿತು.







