ಮಂಗಳೂರು ಧರ್ಮಪ್ರಾಂತದ ವಾರ್ಷಿಕ ಮೆರವಣಿಗೆ

ಮಂಗಳೂರು, ಜ. 5: ಮಂಗಳೂರು ಧರ್ಮಪ್ರಾಂತದ ವಾರ್ಷಿಕ ಪರಮ ಪ್ರಸಾದ ಮೆರವಣಿಗೆಯು ನಗರದಲ್ಲಿ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅವರ ನೇತೃತ್ವದಲ್ಲಿ ರವಿವಾರ ನಡೆಯಿತು.
ಮಿಲಾಗ್ರಿಸ್ ಚರ್ಚ್‌ನಿಂದ ರೊಜಾರಿಯೋ ಕೆಥೆಡ್ರಲ್ ತನಕ ನಡೆದ ಮೆರವಣಿಗೆಯಲ್ಲಿ ಮಂಗಳೂರು ನಗರ ಮತ್ತು ಸುತ್ತಮುತ್ತಲ ಚರ್ಚ್‌ಗಳ ಕೆಥೋಲಿಕ್ ಕ್ರೈಸ್ತರು ಭಾಗವಹಿಸಿದ್ದರು. ಅನೇಕ ಮಂದಿ ಧರ್ಮಗುರುಗಳು ಮತ್ತು ಧರ್ಮ ಭಗಿನಿಯರು ಪಾಲ್ಗೊಂಡಿದ್ದರು.
ವರ್ಷಂಪ್ರತಿಯಂತೆ ಪ್ರಾರಂಭದಲ್ಲಿ ಅಪರಾಹ್ನ 3:30ಕ್ಕೆ ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ಬಲಿಪೂಜೆ ನೆರವೇರಿದ್ದು, ಬಳಿಕ ಹಂಪನಕಟ್ಟೆ ಜಂಕ್ಷನ್ ಮತ್ತು ಎ.ಬಿ.ಶೆಟ್ಟಿ ವೃತ್ತದ ಮೂಲಕ ಮೆರವಣಿಗೆಯು ರೊಜಾರಿಯೋ ಕೆಥೆಡ್ರಲ್‌ಗೆ ಸಾಗಿತು. ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಪರಮ ಪ್ರಸಾದದ ಸಂಪುಟದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯ ಬಳಿಕ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಪರಮ ಪ್ರಸಾದದ ಆರಾಧನೆ ನಡೆಯಿತು. ಧರ್ಮಪ್ರಾಂತದ ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ಫಾ.ವಿಜಯ್ ಮಚಾದೊ ಅವರು ಇದನ್ನು ನಡೆಸಿಕೊಟ್ಟರು. ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ನಿರ್ದೇಶಕ ಫಾ.ವಿಲ್ಫ್ರೆಡ್ ರೊಡ್ರಿಗಸ್ ಅವರು ‘ಬೈಬಲ್’ ವಾಚಿಸಿ ಪ್ರವಚನ ನೀಡಿದರು.
2020 ಮಾನವ ಜೀವ ಗೌರವಿಸುವ ವರ್ಷ: ಮೆರವಣಿಗೆಯ ಬಳಿಕ ನಡೆದ ಕಾರ್ಯಕ್ರಮದಲ್ಲಿ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಧರ್ಮ ಪ್ರಾಂತದ ವತಿಯಿಂದ 2019ರಲ್ಲಿ ನಡೆದ ಯುವಜನರಿಗೆ ಸಮರ್ಪಿಸಿದ ವರ್ಷಾಚರಣೆಯ ಸಮಾರೋಪ ಹಾಗೂ 2020ರಲ್ಲಿ ನಡೆಯಲಿರುವ ಮಾನವ ಜೀವಕ್ಕೆ ಗೌರವ ಕೊಡುವ ವರ್ಷಾಚರಣೆಯ ಪ್ರಾರಂಭೋತ್ಸವವನ್ನು ಘೋಷಿಸಿದರು. ಈ ಬಗೆಗಿನ ಲಾಂಛನವನ್ನು ಅನಾವರಣ ಮಾಡಿದರು. ಐಸಿವೈಎಂ ಕೇಂದ್ರೀಯ ಸಮಿತಿಯ ಅಧ್ಯಕ್ಷ ಲಿಯೋನ್ ಸಲ್ದಾನ್ಹಾ ಅವರು ಯುವಜನರಿಗೆ ಸಮರ್ಪಿಸಿದ ವರ್ಷದಲ್ಲಿ ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳನ್ನು ವಿವರಿಸಿದರು.
ಯುವಜನರ ವರ್ಷಾಚರಣೆಯ ನೆನಪಿಗಾಗಿ ಯುವಜನ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುತ್ತಿದ್ದು, ಅದಕ್ಕೆ ಧರ್ಮಪ್ರಾಂತದ ವತಿಯಿಂದ ಎರಡು ಲಕ್ಷ ರೂ. ನೀಡಲಾಗುವುದು. ಪ್ರತಿಯೊಂದು ಚರ್ಚ್‌ನ ಐಸಿವೈಎಂ ಘಟಕವೂ ಈ ನಿಧಿಗೆ ಕೊಡುಗೆಯನ್ನು ನೀಡಬೇಕು ಎಂದು ಬಿಷಪ್ ಮನವಿ ಮಾಡಿದರು.
ಫೆ.2ರಂದು ಬೆಳ್ತಂಗಡಿಯಲ್ಲಿ ಸಮಾಜ ಸಂಘಟನೆಯ ಹಿತದೃಷ್ಟಿಯಿಂದ ಕೆಥೋಲಿಕ್ ಕ್ರೈಸ್ತ ಮಹಾ ಸಮಾವೇಶ ನಡೆಯಲಿದ್ದು, ಅದರಲ್ಲಿ ಯುವಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದರು.
ಪ್ರತಿಯೊಂದು ಮಾನವ ಜೀವ ಅಮೂಲ್ಯ. ಗಂಡು- ಹೆಣ್ಣು, ಧರ್ಮ- ಜಾತಿ, ಶ್ರೀಮಂತ- ಬಡವ ಎನ್ನದೆ ಎಲ್ಲ ಮನುಷ್ಯ ಜೀವ ಗಳನ್ನು ಗೌರವಿಸೋಣ. ಪ್ರತಿಯೊಂದು ಮಾನವ ಜೀವಕ್ಕೆ ಬದುಕುವ ಹಕ್ಕು ಇದೆ. ಈ ಹಕ್ಕನ್ನು ರಕ್ಷಿಸುವ ಬಗ್ಗೆ ಸಂಕಲ್ಪ ಮಾಡೋಣ ಎಂದು ಬಿಷಪ್ ಅವರು ತಮ್ಮ ಸಂದೇಶದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಧರ್ಮಪ್ರಾಂತದ ಪ್ರಧಾನ ಗುರು ಮ್ಯಾಕ್ಸಿಂ ಎಲ್. ನೊರೊನ್ಹಾ, ನಿವೃತ್ತ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಡೆನಿಸ್ ಮೊರಾಸ್ ಪ್ರಭು, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾ.ರಿಚಾರ್ಡ್ ಕುವೆಲ್ಲೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತಿತರರು ಭಾಗವಹಿಸಿದ್ದರು.








