ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಸ್ವರ್ಣ ತುಲಾಭಾರ

ಉಡುಪಿ, ಜ.5: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಸ್ವರ್ಣ ತುಲಾಭಾರ ಕಾರ್ಯಕ್ರಮವನ್ನು ರವಿ ವಾರ ರಥಬೀದಿಯ ಸುರ್ಮಾ ವೇದಿಕೆಯಲ್ಲಿ ನಡೆಸಲಾಯಿತು.
ಸೃಷ್ಟಿ ನೃತ್ಯ ಕಲಾ ಕುಟೀರ ಕಲಾವಿದರಿಂದ ಶ್ರೀಕೃಷ್ಣ ಸಂದರ್ಶನಂ ನೃತ್ಯ ರೂಪಕದ ಬಳಿಕ ಗೋಧೂಳಿ ಸಮಯದಲ್ಲಿ ಶ್ರೀಕೃಷ್ಣ ದೇವರಿಗೆ ಸುವರ್ಣ ತುಲಾಭಾರ ನೆರವೇರಿಸಲಾಯಿತು. ಒಂದು ತೊಲೆ ಚಿನ್ನ ನೀಡಿದ ಭಕ್ತರಿಗೆ ಸ್ವತಃ ತಕ್ಕಡಿಯಲ್ಲಿ ಚಿನ್ನವನ್ನು ಹಾಕಲು ಅವಕಾಶ ನೀಡಲಾಯಿತು.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮನಸ್ಸಿನ ನೋವಿನ ಭಾರವನ್ನು ಕೃಷ್ಣನಿಗೆ ಅರ್ಪಿಸಿದರೆ ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯ. ನಾವು ಇಲ್ಲಿ ಮಾಧ್ಯಮವಷ್ಟೆ. ಭಕ್ತರು ಪ್ರೀತಿಯಿಂದ ಕೊಟ್ಟ ಕಾಣಿಕೆಯನ್ನು ದೇವರಿಗೆ ಸಮುರ್ಪಿಸುತ್ತಿದ್ದೇವೆ ಎಂದರು.
ಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಬಾಳೆಗಾರು ಶ್ರೀ ರಘು ಭೂಷಣತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಸೋದೆ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಬೆಂಗಳೂರು ಇಸ್ಕಾನ್ ಮುಖ್ಯಸ್ಥ ಮಧುಪಂಡಿತ್ ದಾಸ್ ಉಪಸ್ಥಿತರಿದ್ದರು.







