ಉಡುಪಿ: ಮೀನುಗಾರರ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
ಉಡುಪಿ : ಕೇಂದ್ರ ಸರಕಾರ 2018-2019ನೆ ಸಾಲಿನ ಆಯವ್ಯಯ ದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸೌಲಭ್ಯವನ್ನು ಮೀನುಗಾರರಿಗೆ, ಮೀನು ಕೃಷಿಕರಿಗೆ ವಿಸ್ತರಿಸುವ ಬಗ್ಗೆ ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಮೀನುಗಾರರ ಮೊದಲ ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಮಾಲತಿ ಸಾಂಕೇತಿಕವಾಗಿ ಜ.2ರಂದು ತುಮಕೂರಿನಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳಿಂದ ಪಡೆದಿದ್ದಾರೆ.
ಆರ್‌ಬಿಐ ಮಾರ್ಗಸೂಚಿಯಂತೆ ಸುಸ್ತಿದಾರರಲ್ಲದ ಮೀನುಗಾರರು, ಮೀನು ಕೃಷಿಕರು(ವೈಯುಕಿತಿಕ, ಗುಂಪು, ಪಾಲುದಾರಿಕೆ, ಗುತ್ತಿಗೆ ಕೃಷಿ, ಸ್ವ-ಸಹಾಯ ಗುಂಪುಗಳು, ಜೆಎಲ್‌ಜಿ ಸಂಘಗಳು, ಮಹಿಳಾ ಗುಂಪುಗಳು) ಈ ಸೌಲಭ್ಯ ವನ್ನು ಪಡೆದು ಕೊಳ್ಳಬಹುದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ನ ಉದ್ದೇಶ ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿರುವ ಮೀನುಗಾರರಿಗೆ ದುಡಿ ಯುವ ಬಂಡವಾಳ ಒದಗಿಸುವುದಾಗಿದೆ.
ಪಂಜರ ಮೀನು ಕೃಷಿ, ಸಿಗಡಿ, ಕಲ್ಲ, ಪಚ್ಚಿಲೆ ಕೃಷಿ ಇತ್ಯಾದಿಗಳನ್ನು ಕೈಗೊಳ್ಳುತ್ತಿ ರುವ ಮೀನು ಕೃಷಿಕರು ಮತ್ತು ದೋಣಿ ಹೊಂದಿರುವ ಮೀನುಗಾರರು ಅವರ ಅವಶ್ಯಕತೆಗೆ ತಕ್ಕಂತೆ ಗರಿಷ್ಠ 380000 ರೂ. ವರೆಗೆ ಸಾಲವನ್ನು ಪಡೆದುಕೊಳ್ಳ ಬಹುದಾಗಿದೆ.
ಮಾಲತಿ ಅವರಿಗೆ 30,000 ರೂ. ಸಾಲದ ಮಿತಿಯಾಗಿ ಶೇ.7 ಬಡ್ಡಿಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ಕೋಟತಟ್ಟು ಶಾಖೆ ಮಂಜೂರು ಮಾಡಿದೆ. ಉಡುಪಿ ಜಿಲ್ಲೆಯಲ್ಲಿ ಕೆಸಿಸಿನ ನೋಂದಣಿಯ ವಿಶೇಷ ಅಭಿಯಾನ ನಡೆಸಿದ್ದು, ಸುಮಾರು 10000ದಷ್ಟು ಅರ್ಜಿಗಳನ್ನು ಇಲಾಖೆಯಿಂದ ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದೆ. ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಡೀ ರಾಜ್ಯದಲ್ಲಿ ಮಂಜೂರಾದ 1140 ಕಾರ್ಡ್‌ಗಳಲ್ಲಿ ಅತಿಹೆಚ್ಚು 528 ಕಾರ್ಡ್‌ಗಳು ಉಡುಪಿ ಜಿಲ್ಲೆಯಿಂದ ಮಂಜೂರಾಗಿವೆ ಎಂದು ಮೀನುಗಾರಿಕಾ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.







