ಸಿಎಎ ಪರ ಸಹಿ ಸಂಗ್ರಹವನ್ನು ಧಿಕ್ಕರಿಸಿ: ದಲಿತರಿಗೆ ಶ್ಯಾಮರಾಜ ಬಿರ್ತಿ ಕರೆ
ಉಡುಪಿ, ಜ.5: ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟ ಹಿಂದೂ ಕೋಮುವಾದಿಗಳ ಹಿಡನ್ ಅಜೆಂಡಾವನ್ನು ಧಿಕ್ಕರಿಸಿ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ ಬಿರ್ತಿ ಕರೆ ಕೊಟ್ಟಿದ್ದಾರೆ.
ಮಣಿಪಾಲ ಸಮೀಪದ ಪ್ರಗತಿ ನಗರದಲ್ಲಿಂದು ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದಲಿತರು, ಅಲ್ಪಸಂಖ್ಯಾತರು ಈ ದೇಶದ ಮೂಲನಿವಾಸಿಗಳು. ಎಲ್ಲಿಂದಲೋ ಬಂದಂತಹ ಆರ್ಯರಿಗೆ ನಾವು ನಮ್ಮ ಪೌರತ್ವ ವನ್ನು ಸಾಬೀತುಪಡಿಸುವ ಅಗತ್ಯ ಇಲ್ಲ. ಇದರ ಪರವಾಗಿ ಮನೆ ಬಾಗಿಲಿಗೆ ಬರುವ ಸಹಿ ಸಂಗ್ರಹಗಾರರನ್ನು ಮನೆಯಿಂದ ಹೊರ ನಡೆಯಲು ಹೇಳಿ ಎಂದು ತಾಕೀತು ಮಾಡಿದರು.
ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಕಂಡು ವಿಚಲಿತಗೊಂಡಿರುವ ಮನುವಾದಿಗಳು ಮತ್ತೊಂದು ಹೊಸ ನಾಟಕ ವಾಡುತ್ತಿದ್ದಾರೆ. ದೇಶ ಆರ್ಥಿಕ ಪರಿಸ್ಥಿತಿ ನೆಲಕಚ್ಚಿ, ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು, ಸಾವಿರಾರು ಕಂಪೆನಿಗಳು ಮುಚ್ಚಿದರೂ ತಲೆಕೆಡಿಸಿಕೊಳ್ಳದ ಸರಕಾರ ಈಗ ಸಂವಿಧಾನದ ಮುನ್ನುಡಿಯನ್ನೇ ಧಿಕ್ಕರಿಸಲು ಹೊರಟಿದೆ. ಜಾತ್ಯತೀತ ಭಾರತವನ್ನು ಧರ್ಮದ ಆಧಾರದಲ್ಲಿ ಪೌರತ್ವ ನೀಡಿ ವಿಭಜಿಸಲು ಹೊರಟಿದೆ ಎಂದು ದೂರಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಚಳವಳಿ ಬಿಟ್ಟರೆ , ಸ್ವಾತಂತ್ರ್ಯ ನಂತರ ದೇಶಾದ್ಯಂತ ನಡೆಯುತ್ತಿರುವ ಅತೀ ದೊಡ್ಡ ಚಳುವಳಿ ಇದು ,ಈ ದೇಶದ ಮೂಲನಿವಾಸಿಗಳಾದ ನಾವು ಈ ದೇಶದ ಪೌರರು ಎಂದು ದಾಖಲೆಕೊಡಿ ಎಂದು ಎಲ್ಲಿಂದಲೋ ಬಂದ ಹೊರದೇಶಿಗರು ಕೇಳೋ ಅಗತ್ಯ ಇಲ್ಲ. ಯಾವುದೇ ಕಾರಣಕ್ಕೂ ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಾಗಲು ಬಿಡಬಾರದು ಎಂದರು.
ಉಡುಪಿ ತಾಲೂಕು ಸಂಚಾಲಕ ಶಂಕರ್ ದಾಸ್ ಚೆಂಡ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಠಾಣಾಧಿಕಾರಿ ಶ್ರೀಧರ ನಂಬಿಯಾರ್, ಅಲೆಯೂರು ಪಂಚಾಯತ್ ಅಧ್ಯಕ್ಷರಾದ ಶ್ರಿಕಾಂತ ನಾಯಕಾ , ಮಾಜಿ ಅಧ್ಯಕ್ಷರಾದ ಹರೀಶ್ ಕಿಣಿ , ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ , ಶ್ಯಾಮಸುಂಧರ ತೆಕ್ಕಟ್ಟೆ , ಲೋಕೇಶ ಕಂಚಿನಡ್ಕ , ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.







