ಹೆಣ್ಣಿನ ಆಂತರೀಕ ವಿಷಯಗಳನ್ನು ಬರೆಯುವ ಕಲೆ ಕರಗತ: ಟಿ.ಎನ್. ಸೀತಾರಾಮ್
‘ಸೀತಾಳೆದಂಡೆಯ ಸದ್ದಿಲದ ಕಥೆಗಳು’ ಕೃತಿ ಲೋಕಾರ್ಪಣೆ
ಬೆಂಗಳೂರು, ಜ.5: ಹೆಣ್ಣಿನ ಆಂತರಿಕ ವಿಷಯವನ್ನು ವಿಮರ್ಶಾತ್ಮಕವಾಗಿ ಬರೆಯುವ ಕಲೆಯನ್ನು ಲೇಖಕಿ ಭಾರತಿ ಹೆಗಡೆ ಕರಗತ ಮಾಡಿಕೊಂಡಿದ್ದಾರೆ ಎಂದು ಚಲನಚಿತ್ರ ನಿರ್ದೇಕ ಟಿ.ಎನ್.ಸೀತಾರಾಮ್ ಹೇಳಿದ್ದಾರೆ.
ರವಿವಾರ ಕಸಾಪ ಸಭಾಂಗಣದಲ್ಲಿ ವಿಕಾಸ ಪ್ರಕಾಶನ ಹಮ್ಮಿಕೊಂಡಿದ್ದ ಭಾರತಿ ಹೆಗಡೆ ಅವರ ಕಥಾ ಸಂಕಲನ ‘ಸೀತಾಳೆದಂಡೆಯ ಸದ್ದಿಲದ ಕಥೆಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯು.ಆರ್ ಅನಂತಮೂರ್ತಿ ಅವರು ಹೇಳುತ್ತಿದ್ದ ಕ್ರಿಟಿಕಲ್ ಇನ್‌ಸೈಡರ್ ರೀತಿಯ ನಿರೂಪಣೆ ಹಾಗೂ ಗಂಡನ ವಿರುದ್ಧ ಮಾತನಾಡಲು ಸಾಧ್ಯವಿರದಿದ್ದಾಗ ಹೆಣ್ಣು ಅವಳ ಒಳಗೊಳಗೆ ಪ್ರತಿಭಟಿಸುವ ರೀತಿಯನ್ನು ಲೇಖಕಿ ಭಾರತಿ ಸಶಕ್ತವಾಗಿ ಗ್ರಹಿಸಿ ಬರೆಯುತ್ತಾರೆ ಎಂದರು.
ಲೇಖಕಿ ಭಾರತಿಯವರ ಕಥೆಗಳಲ್ಲಿನ ಅನೇಕ ಪಾತ್ರಗಳು ಯಾವುದೋ ರೀತಿಯ ಬಿಡುಗಡೆಯನ್ನು ಪಡೆಯಲು ಪ್ರಯತ್ನಿಸುತ್ತಿವೆ. ಆ ಬಿಡುಗಡೆಯು ಒಂದು ಚೌಕಟ್ಟಿನೊಳಗೇ ಇರುವ ಕಟ್ಟುಪಾಡುಗಳನ್ನು ಧಿಕ್ಕರಿಸುವ, ಚೌಕಟ್ಟನ್ನು ಮೀರದೆಯೇ ಪ್ರತಿಭಟಿಸುವ ಅಂಶಗಳು ಈ ಕಥಾ ಸಂಕಲನದಲ್ಲಿ ಗಮನ ಸೆಳೆಯುತ್ತದೆ ಎಂದರು.
ಹೆಣ್ಣಿನ ಕುರಿತ ಕಥೆಗಳು ಒಂದು ರೀತಿಯಿಂದ ಸಂಪ್ರದಾಯವನ್ನು ಪ್ರಶ್ನಿಸುವ ಮಟ್ಟಕ್ಕೆ ಯಾವುದೇ ಕಥೆಗಳು ಇರುವುದು ಕಷ್ಟ ಸಾಧ್ಯ. ಬದಲಿಗೆ ಆ ಸಂಪ್ರದಾಯಗಳು ಆಯಾ ಪಾತ್ರಗಳಿಗೆ ಸರಿಯಾಗಿ ವರ್ತಿಸದಿದ್ದಾಗ ಆಗುವ ಘರ್ಷಣೆಯನ್ನೂ, ಆ ಘರ್ಷಣೆಯನ್ನು ಆ ಪಾತ್ರಗಳು ನಿಭಾಯಿಸುವ ರೀತಿಯನ್ನು ಈ ಸೀತಾಳೆದಂಡೆಯ ಸದ್ದಿಲದ ಕಥೆಗಳು ಒಳಗೊಂಡಿದೆ ಎಂದು ಹೇಳಿದರು.
ಕವಿ ಸುಬ್ಬು ಹೊಲೆಯಾರ್ ಮಾತನಾಡಿ, ಅಸ್ಪಶ್ಯರಿಗೆ, ದಲಿತರಿಗೆ ಆಗುವ ಹಿಂಸೆಗಿಂತ ಹೆಣ್ಣಿನ ಮೇಲೆ ನಡೆಯುವ ಹಿಂಸೆಗಳೇ ವಿಕೃತ. ಹೆಣ್ಣಿಗೆ ಹಿಂಸೆ ನೀಡುವುದು ಸಲ್ಲ. ಸೀತಾಳದಂಡೆಯ ಸದ್ದಿಲ್ಲದ ಕಥೆಗಳು ಸಣ್ಣ-ಸಣ್ಣ ಗುಣವನ್ನು ಒಳಗೊಂಡಂತೆ ಹೆಣ್ಣಿನ ಬಗ್ಗೆ ಬರೆಯಲಾಗಿದೆ. ಇದರಲ್ಲಿ ವಿಶೇಷವಾಗಿ ಹೆಣ್ಣಿನ ಧ್ವನಿಯನ್ನು ಹೊರಹಾಕುವ ಹಾಗೂ ಅವಳನ್ನು ಬಲಪಡಿಸುವ ಸಂಗತಿಗಳು ಓದುಗರ ಗಮನ ಸೆಳೆಯಲಿದೆ ಎಂದರು. ಪತ್ರಕರ್ತೆ ಡಾ.ಪೂರ್ಣಿಮಾ, ಲೇಖಕಿ ಎನ್. ಸಂಧ್ಯಾರಾಣಿ ಉಪಸ್ಥಿತರಿದ್ದರು.







