ವಿವಾದಗಳು ರಕ್ಷಣಾ ಸಾಮಗ್ರಿ ಖರೀದಿಯನ್ನು ನಿಧಾನವಾಗಿಸುತ್ತದೆ: ಬಿ.ಎಸ್. ಧನೋವಾ

ಮುಂಬೈ, ಜ. 5: ರಫೇಲ್ ಯುದ್ಧ ವಿಮಾನ ಖರೀದಿ ವಿವಾದ ಉಲ್ಲೇಖಿಸಿದ ವಾಯು ಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್. ಧನೋವಾ, ಇಂತಹ ವಿವಾದಗಳು ರಕ್ಷಣಾ ಸಾಮಗ್ರಿ ಖರೀದಿಯನ್ನು ನಿಧಾನಗೊಳಿಸುತ್ತದೆ, ಶಸಸ್ತ್ರ ಸೇನಾ ಪಡೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರವಿವಾರ ಹೇಳಿದ್ದಾರೆ.
ಬಾಲಕೋಟ್ ವಾಯುದಾಳಿ ಬಳಿಕ ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಸಂದರ್ಭ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್ 21ನ್ನು ಹಾರಿಸುವ ಬದಲು ರಫೇಲ್ ಅನ್ನು ಹಾರಿಸಿದ್ದರೆ, ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ಅವರು ತಿಳಿಸಿದರು.
ಬಾಂಬೆ ಐಐಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನೋವಾ, ರಫೇಲ್ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಉತ್ತಮ ತೀರ್ಪು (ನರೇಂದ್ರ ಮೋದಿಗೆ ಕ್ಲೀನ್ ಚಿಟ್) ನೀಡಿದೆ ಎಂದರು.
ಒಂದು ವೇಳೆ ನೀವು ರಕ್ಷಣಾ ವ್ಯವಸ್ಥೆಯನ್ನು ರಾಜಕೀಯಗೊಳಿಸಿದರೆ, ರಕ್ಷಣಾ ವ್ಯವಸ್ಥೆ ಸಂಪೂರ್ಣ ಹಿಂದುಳಿಯುತ್ತದೆ ಎಂದು ನಾನು ಯಾವಾಗಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ ಎಂದು ಅವರು ಹೇಳಿದರು.
ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ಫೈಲ್‌ಗಳು ನಿಧಾನವಾಗಿ ಮುಂದುವರಿಯುತ್ತಿವೆ. ಯಾಕೆಂದರೆ ಜನರು ತುಂಬಾ ಪ್ರಜ್ಞಾವಂತರಾಗಲು ಆರಂಭಿಸಿದ್ದಾರೆ ಎಂದು ಹೇಳಿದ ಅವರು, ಗನ್‌ಗಳು ಉತ್ತಮವಾಗಿದ್ದರೂ ಬೋಫರ್ಸ್ ಒಪ್ಪಂದ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿತ್ತು ಎಂದರು.
ಇದರೊಂದಿಗೆ ತೆರಿಗೆದಾರರಾಗಿ ಜನರಿಗೆ ವಿಮಾನದ ಬೆಲೆಯ ಕುರಿತು ಪ್ರಶ್ನೆ ಮಾಡುವ ಹಕ್ಕು ಇದೆ ಎಂದು ಅವರು ಹೇಳಿದರು.
ಬೋಫರ್ಸ್ ಒಪ್ಪಂದದಿಂದ ವಿವಾದ ಸೃಷ್ಟಿಯಾದ ಕಾರಣಕ್ಕೆ ರಕ್ಷಣೆ ಆಧುನಿಕೀಕರಣ ನಿಧಾನವಾಯಿತು. ಅನಂತರ ಅದರಿಂದ ನಿಮಗೇ ತೊಂದರೆ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಅವರ ಹೇಳಿಕೆಯನ್ನು ಜನರು ರಾಜಕೀಯ ಎಂದು ಹೇಳುತ್ತಿದ್ದಾರೆ. ಆದರೆ, ಸತ್ಯ ಏನೆಂದರೆ ಈ ಹೇಳಿಕೆ ಸರಿಯಾಗಿದೆ ಎಂದು ಅವರು ತಿಳಿಸಿದರು.