ಫೆ.8ರಂದು ದಿಲ್ಲಿ ವಿಧಾನಸಭಾ ಚುನಾವಣೆ,ಫೆ.11ಕ್ಕೆ ಫಲಿತಾಂಶ ಪ್ರಕಟ
ಹೊಸದಿಲ್ಲಿ,ಜ.6: ಚುನಾವಣಾ ಆಯೋಗವು ಸೋಮವಾರ ದಿಲ್ಲಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಲ್ಲ 70 ವಿಧಾನಸಭಾ ಸ್ಥಾನಗಳಿಗೆ ಫೆ.8ರಂದು ಮತದಾನ ನಡೆಯಲಿದ್ದು,ಫೆ.11ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ. ದಿಲ್ಲಿ ವಿಧಾನಸಭೆಯ ಅಧಿಕಾರಾವಧಿಯು ಫೆ.22ರಂದು ಅಂತ್ಯಗೊಳ್ಳಲಿದ್ದು,ಅದಕ್ಕೂ ಮೊದಲೇ ನೂತನ ವಿಧಾನಸಭೆ ರಚನೆಯಾಗಬೇಕಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು, ಮಾದರಿ ನೀತಿ ಸಂಹಿತೆಯು ಸೋಮವಾರದಿಂದಲೇ ಜಾರಿಗೊಂಡಿದ್ದು,ಒಂದೇ ಹಂತದಲ್ಲಿ ಎಲ್ಲ 13,750 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಜ.14ರಂದು ಅಧಿಸೂಚನೆ ಪ್ರಕಟಗೊಳ್ಳಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಜ.21 ಕೊನೆಯ ದಿನಾಂಕವಾಗಿದೆ. ಜ.22ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜ.24 ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ಫೆ.13ಕ್ಕೆ ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನೂ ಪ್ರಕಟಿಸಿದ್ದು,ದಿಲ್ಲಿಯಲ್ಲಿ 1.46 ಕೋ.ಅರ್ಹ ಮತದಾರರಿದ್ದಾರೆ.
2015ರ ವಿಧಾನಸಭೆಯಲ್ಲಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ನ್ನು ಗೆದ್ದುಕೊಂಡಿದ್ದ ಆಮ್ ಆದ್ಮಿ ಪಾರ್ಟಿಯು ಅಧಿಕಾರಕ್ಕೇರಿತ್ತು. ಬಿಜೆಪಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ,ಕಾಂಗ್ರೆಸ್ಗೆ ಒಂದೂ ಸ್ಥಾನ ದೊರಕಿರಲಿಲ್ಲ.