ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲ ಆರೋಪ: ಚಿಕ್ಕಮಗಳೂರು ನಗರಸಭೆ ಎದುರು ಕಾಂಗ್ರೆಸ್ ಧರಣಿ
ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಎಲ್ಲ ಕಾಮಗಾರಿಗಳ ತನಿಖೆಗೆ ಆಗ್ರಹ

ಚಿಕ್ಕಮಗಳೂರು, ಜ.6: ನಗರಸಭೆ ಅಧಿಕಾರಿಗಳು ನಾಗರಿಕರಿಗೆ ಸಮರ್ಪಕವಾದ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ನಗರದಲ್ಲಿ ಕೈಗೊಂಡಿರುವ ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಯೋಜನೆ, ರಸ್ತೆ ಕಾಮಗಾರಿಗಳು ಕಳಪೆಯಾಗಿದ್ದು, ಹಣವನ್ನು ಲೂಟಿ ಮಾಡಲಾಗುತ್ತಿದೆ. ಕಸ ವಿಲೇವಾರಿ, ಆಶ್ರಯ ಮನೆ ಹಂಚಿಕೆ ಯೋಜನೆಗಳಡಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದೆ. ನಗರಸಭೆಯ ಸಿಬ್ಬಂದಿ ಕೊರತೆ ನೀಗಿಸುವಲ್ಲಿ ಸರಕಾರ ವಿಫಲವಾಗಿದ್ದು, ನಗರಸಭೆಯಲ್ಲಿ ದಲ್ಲಾಳಿಗಳ ಕಾಟ ತೀವ್ರವಾಗಿದೆ ಎಂದು ಆರೋಪಿಸಿ ಹಾಗೂ ನಗರಸಭೆ ವತಿಯಿಂದ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಮುಖಂಡ ಎಂ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಮಾಜಿ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬಿನ್ ಮೋಸೆಸ್, ಸುರೇಖಾ ಸಂಪತ್ ಮತ್ತಿತರ ಮುಖಂಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಸಮಾವೇಶಗೊಂಡು ನಗರಸಭೆಯ ಹಿಂದಿನ ಆಡಳಿತ ಪಕ್ಷ ಬಿಜೆಪಿ ಸದಸ್ಯರೂ ಸೇರಿದಂತೆ ಅಧಿಕಾರಿಗಳು, ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಮುಖಂಡರು, ಚಿಕ್ಕಮಗಳೂರು ನಗರಸಭೆಯಲ್ಲಿ ಕಳೆದ 12 ವರ್ಷಗಳಿಂದ ಬಿಜೆಪಿ ಪಕ್ಷದವರು ಆಡಳಿತ ನಡೆಸಿದ್ದು, ಸರಕಾರದ ವಿವಿಧ ಯೋಜನೆ ಹಾಗೂ ಅನುದಾನದಡಿಯಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳನ್ನು ಅತ್ಯಂತ ಕಳಪೆಯಾಗಿ ನಿರ್ವಹಿಸಿದ್ದಾರೆ. ಬಿಜೆಪಿ ಸದಸ್ಯರು ಹಾಗೂ ಅಧಿಕಾರಿಗಳು ನಗರಸಭೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ. ಎಲ್ಲ ಕಾಮಗಾರಿಗಳನ್ನು ಕ್ಷೇತ್ರದ ಶಾಸಕರ ಹಿಂಬಾಲಕರೇ ನಿರ್ವಹಿಸುತ್ತಿದ್ದು, ಅವರನ್ನೂ ಯಾರೂ ಪ್ರಶ್ನಿಸದಂತಹ ವಾತಾವರಣವನ್ನು ನಿರ್ಮಿಸಿದ್ದಾರೆ. ಕೆಲ ಅಕ್ರಮಗಳಿಗೆ ಶಾಸಕ ಸಿ.ಟಿ.ರವಿ ಅವರೇ ಮುಂದಾಳತ್ವ ವಹಿಸಿದ್ದು, ಸರಕಾರದ ಅನುದಾನವನ್ನು ವಿವಿಧ ಕಾಮಗಾರಿಗಳ ಹೆಸರಲ್ಲಿ ಲೂಟಿ ಮಾಡಿದ್ದಾರೆ ಎಂದು ಮಖಂಡರು ಆರೋಪಿಸಿದರು.
ನಗರದ ನಾಗರಿಕರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುತ್ತಿಲ್ಲ. ಸದ್ಯ ಹಿರೆಕೊಳಲೆ ಕೆರೆ ಹಾಗೂ ಯಗಚಿ ಡ್ಯಾಮ್‍ನಿಂದ ನಗರಕ್ಕೆ ನೀರು ಪೂರೈಸಲಾಗುತ್ತಿದ್ದು, ಸದ್ಯ ಯಗಚಿ ಡ್ಯಾಂ ತುಂಬಿದ್ದರೂ ನಗರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೃತ್ ಯೋಜನೆಯಡಿಯಲ್ಲಿ ದಿನದ 24ಗಂಟೆಗಳಲ್ಲೂ ನೀರು ಪೂರೈಸುವುದಾಗಿ ಹೇಳುತ್ತಾ ಮನೆಮನೆಗೆ ನೀರಿನ ಸಂಪರ್ಕ ನೀಡಲಾಗಿದೆ. ವಾರಕ್ಕೊಮ್ಮೆ ನೀರು ನೀಡುತ್ತಿರುವ ನಗರಸಭೆ ದಿನದ 24 ಗಂಟೆಯೂ ನೀರು ಬಿಡಲು ಹೇಗೆ ಸಾಧ್ಯ? ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಕೋಟ್ಯಂತರ ರೂ. ಅನುದಾನವನ್ನು ಕೊಳ್ಳೆ ಹೊಡೆಯಲು ರೂಪಿಸಿರುವ ಪ್ಲಾನ್ ಆಗಿದೆ ಎಂದು ಮುಖಂಡರು ದೂರಿದರು.
ನಗರದಲ್ಲಿ ಸಮರ್ಪಕವಾಗಿ ಕಸವಿಲೇವಾರಿ ಮಾಡದಿರುವುದರಿಂದ ಅನೈರ್ಮಲ್ಯ ತಾಂಡವವಾಡುತ್ತಿದೆ. ಒಳಚರಂಡಿ ಕಾಮಗಾರಿಗೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಚರಂಡಿಗಳು ಕೊಳಚೆ ನೀರಿನಿಂದ ತುಂಬಿದ್ದು, ಕೊಳಚೆ ನೀರು ಯಗಚಿ ಡ್ಯಾಂ ಸೇರುತ್ತಿದೆ. ಇದೇ ನೀರನ್ನು ನಗರಕ್ಕೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಪರಿಣಾಮ ವಿವಿಧ ರೋಗಗಳು ಬಡಾವಣೆಗಳ ನಾಗರಿಕರನ್ನು ಕಾಡುತ್ತಿವೆ. ಇದರಿಂದಾಗಿ ನಗರದ ಜಿಲ್ಲಾಸ್ಪತ್ರೆ ರೋಗಿಗಳಿಂದ ಭರ್ತಿಯಾಗುವಂತಾಗಿದೆ. ಕುಡಿಯುವ ನೀರಿನ ಯೋಜನೆ, ರಸ್ತೆ, ಒಳಚರಂಡಿ ಕಾಮಗಾರಿಗಳ ನೆಪದಲ್ಲಿ ಬಡಾವಣೆಗಳ ರಸ್ತೆಗಳನ್ನು ಅಗೆದು ಬಗೆದು ಹಾಳು ಮಾಡಲಾಗುತ್ತಿದ್ದು, ಡಾಂಬರೀಕರಣದ ನೆಪದಲ್ಲಿ ಕಳಪೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ನಗರಸಭೆಯಲ್ಲಿ ಇ ಖಾತೆಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು, ಅಂಗಡಿ ಮುಂಗಟ್ಟುಗಳ ವ್ಯಾಪಾರ ಪರವಾನಿಗೆಗೆ ಭಾರೀ ಲಂಚ ಪಡೆಯಲಾಗುತ್ತಿದೆ. ನಗರಸಭೆಯಲ್ಲಿ ಸಾರ್ವಜನಿಕರು ದಲ್ಲಾಳಿಗಳನ್ನೇ ಅವಲಂಬಿಸುವಂತಾಗಿದ್ದು, ದಲ್ಲಾಳಿಗಳು ನಾಗರಿಕರನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಹಿಂದೆ ಸಿ.ಟಿ.ಅವರೇ ಸಿಬ್ಬಂದಿ ಕೊರತೆ ನೀಗಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ಕೊಂಡೊಯ್ದಿದ್ದರು. ಸದ್ಯ ಅವರೇ ಸಚಿವರಾಗಿದ್ದು, ಅವರದ್ದೇ ಸರಕಾರ ಅಧಿಕಾರದಲ್ಲಿದ್ದರೂ ನಗರಸಭೆ ಸಿಬ್ಬಂದಿ ಕೊರತೆ ಸಮಸ್ಯೆಯನ್ನು ನೀಗಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ನಗರಸಭೆ ಕರ್ನಾಟಕ ಬ್ಯಾಂಕ್ ವತಿಯಿಂದ ನೀಡಲಾದ ರಸ್ತೆ ಕಸ ತೆಗೆಯುವ ಯಂತ್ರ ಹಾಗೂ ಶವಸಾಗಣೆ ವಾಹನ ಸಾರ್ವಜನಿಕರ ಸೇವೆಗೆ ಧಕ್ಕದಂತಾಗಿದ್ದು, ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಿದೆ. ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅವರಿಗೆ ಈ ಎಲ್ಲ ಸಮಸ್ಯೆಗಳ ಅರಿವಿದ್ದರೂ ಅವರು ಅಧಿಕಾರಿಗಳು, ಸಿಬ್ಬಂದಿ ಮೇಲೆ ಹಿಡಿತ ಹೊಂದದೇ ತಮಗೂ ನಗರಸಭೆಗೂ ಸಂಬಂಧವೇ ಇಲ್ಲ ಎಂಬಂತೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಇದೇ ವೇಳೆ ಮುಖಂಡರು ಗಂಭೀರವಾಗಿ ಆರೋಪಿಸಿದರು.
ನಗರಸಭೆಯ ಆಡಳಿತ ವೈಫಲ್ಯಕ್ಕೆ ಕಳೆದ 12 ವರ್ಷಗಳಿಂದ ನಗರಸಭೆಯಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸದಸ್ಯರು ಹಾಗೂ ಶಾಸಕ ಸಿ.ಟಿ.ರವಿ ಅವರೇ ಕಾರಣರಾಗಿದ್ದಾರೆ. ಎಲ್ಲ ಕಾಮಗಾರಿಗಳಿಗೂ ಸಿ.ಟಿ ರವಿ ಅವರ ಸಂಬಂಧಿಕರು, ನಗರಸಭೆಯ ಹಿಂದಿನ ಬಿಜೆಪಿ ಸದಸ್ಯರು ಹಾಗೂ ರವಿ ಹಿಂಬಾಲಕರೇ ಗುತ್ತಿಗೆದಾರರಾಗಿದ್ದಾರೆ. ಇದರಿಂದಾಗಿ ಎಲ್ಲ ಕಾಮಗಾರಿಗಳು ಕಳಪೆಯಾಗಿವೆ. ಆದ್ದರಿಂದ ಕಳೆದ 12 ವರ್ಷಗಳ ಬಿಜೆಪಿ ಆಡಳಿತದ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳನ್ನು ತನಿಖೆ ನಡೆಸಿ ಅನುದಾನ ಲೂಟಿ ಹೊಡೆದವರನ್ನು, ವಿವಿಧ ಯೋಜನೆಗಳಡಿಯಲ್ಲಿ ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಇಂದರೊಂದಿಗೆ ಆಶ್ರಯ ಮನೆಗಳಿಗೆ ಯಾವುದೇ ಶುಲ್ಕ ವಿಧಿಸದೆ ಫಲಾನುಭವಿಗಳಿಗೆ ಮನೆ, ಹಕ್ಕುಪತ್ರ ವಿತರಿಸಬೇಕು. ಕುಡಿಯುವ ನೀರು ಯೋಜನೆ, ಒಳಚರಂಡಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು, ವಿವಿಧ ಬಡಾವಣೆಗಳ ಎಲ್ಲ ರಸ್ತೆಗಳ ಡಾಂಬರೀಕರಣಕ್ಕೆ ಶೀಘ್ರ ಮುಂದಾಗಬೇಕೆಂದು ಮುಖಂಡರು ಸರಕಾರವನ್ನು ಆಗ್ರಹಿಸಿದ ಮುಖಂಡರು, ಬಳಿಕ ನಗರಸಭೆ ಪ್ರಭಾರ ಆಯುಕ್ತ ಚಂದ್ರಶೇಖರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಧರಣಿಯಲ್ಲಿ ಎಐಸಿಸಿ ಸದಸ್ಯ ಬಿ.ಎಂ.ಸಂದೀಪ್, ಯುವ ಕಾಂಗ್ರೆಸ್‍ನ ಶಿವಕುಮಾರ್, ಪವನ್, ನಗರಸಭೆ ಮಾಜಿ ಅಧ್ಯಕ್ಷ ಅಕ್ಬರ್, ಮಾಜಿ ಸದಸ್ಯರಾದ ಸದಸ್ಯರಾದ ಭದ್ರು, ಸುರೇಖಾ ಸಂಪತ್, ಸಿಡಿಎ ಮಾಜಿ ಅಧ್ಯಕ್ಷ ಹನೀಫ್ ಮತ್ತಿತರರು ಪಾಲ್ಗೊಂಡಿದ್ದರು.
2016ರಲ್ಲಿ ಮಂಜೂರಾದ ಅಮೃತ್ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಯಡಿಯಲ್ಲಿ ನಗರದ ನಾಗರಿಕರಿಗೆ 24 ಗಂಟೆ ನೀರು ಕೊಡುವುದಾಗಿ ಹೇಳಿ 4 ವರ್ಷವಾದರೂ ನೀರು ಪೂರೈಕೆ ಮಾಡುತ್ತಿಲ್ಲ. 2011ರಲ್ಲಿ ಮಂಜೂರಾದ ಒಳಚರಂಡಿ ಯೋಜನೆಯಡಿ ಕಾಮಗಾರಿ ಕೈಗೊಂಡು 10 ವರ್ಷವಾದರೂ ಕಾಮಗಾರಿ ಇನ್ನೂ ಮಗಿದಿಲ್ಲ. ಈ ಕಾಗರಿಗಾಗಿ ರಸ್ತೆಗಳನ್ನೆಲ್ಲಾ ಅಗೆದು ಹಾಕಲಾಗಿದೆ. ಗುಂಡಿಗೊಟರುಗಳಿಂದ ತುಂಬಿರುವ ರಸ್ತೆಗಳನ್ನು ಮುಚ್ಚಲೂ ನಾಲ್ಕನೇ ಬಾರಿ ಶಾಸಕರಾಗಿರುವ ಸಿ.ಟಿ.ರವಿ ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ದಂಟರಮಕ್ಕಿ ರಸ್ತೆಯಲ್ಲಿ ಬೈಕ್‍ನಲ್ಲಿ ತಂದೆಯೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾಳೆ. ಪೊಲೀಸರು ರಸ್ತೆ ಕಾಮಗಾರಿ ಕಳಪೆ ಮಾಡಿದ ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸದೇ ವಿದ್ಯಾರ್ಥಿನಿಯ ತಂದೆ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದಾರೆ. ನಗರದ ರಸ್ತೆಗಳ ಗುಂಡಿ ಮುಚ್ಚಲು ಬಿಜೆಪಿ ಸರಕಾರ ಹಾಗೂ ಶಾಸಕ ರವಿ ಅವರಿಗೆ ಇನ್ನೆಷ್ಟು ಬಲಿ ಬೇಕು?
- ಗಾಯತ್ರಿ ಶಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ







