ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು, ಜ. 6: ವಿದೇಶಿ ಪ್ರವಾಸಕ್ಕೆ ತೆರಳುವ ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನೂ ನಾಲ್ಕೈದು ದಿನಗಳಲ್ಲಿ ಹೊಸದಿಲ್ಲಿಗೆ ತೆರಳುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಸಂಪುಟ ವಿಸ್ತರಣೆ ಸಂಬಂಧ ಸಮಾಲೋಚನೆ ನಡೆಸಲಿದ್ದೇನೆ ಎಂದರು.
ವಿದೇಶಿ ಪ್ರವಾಸಕ್ಕೆ ತೆರಳದಿರಲು ತೀರ್ಮಾನಿಸಿದ್ದೆ. ಆದರೆ, ಶೃಂಗಸಭೆ ಬಹಳ ಮುಖ್ಯವಾಗಿದ್ದು, ಹೋಗಲೇಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳುತ್ತಿದ್ದೇನೆ. ಅದಕ್ಕೂ ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಹೊಸದಿಲ್ಲಿಗೆ ತೆರಳುವ ಸಂದರ್ಭದಲ್ಲೆ ಪ್ರಧಾನಿ, ಕೇಂದ್ರ ಹಣಕಾಸು ಸಚಿವರು ಸೇರಿದಂತೆ ವಿವಿಧ ಇಲಾಖೆ ಸಚಿವರನ್ನು ಭೇಟಿ ಮಾಡಲಿದ್ದು, ರಾಜ್ಯದ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲನ್ನು ಬಿಡುಗಡೆ ಮಾಡುವಂತೆ ಕೋರುವೆ ಎಂದು ಹೇಳಿದರು.





