ಮಾದಕ ವಸ್ತು ಜಾಲದ ವಿರುದ್ಧ ಎಚ್ಚರ ಅಗತ್ಯ: ನ್ಯಾ. ಕಡ್ಲೂರು ಸತ್ಯನಾರಾಯಣಾಚಾರ್ಯ
ಕಾನೂನು ಅರಿವು ಕಾರ್ಯಕ್ರಮ

ಮಂಗಳೂರು, ಜ.6: ಮಾದಕ ವಸ್ತು ಮಾರಾಟ ಜಾಲವು ವಿಸ್ತೃತವಾಗಿ ಬೇರೂರಿದ್ದು, ಯುವಕರು ಮತ್ತು ಮುಗ್ದ ಮಕ್ಕಳ ಜೀವನವನ್ನು ಇದು ಬಲಿ ತೆಗೆದುಕೊಳ್ಳುತ್ತಿದೆ. ಹಾಗಾಗಿ ಇದರ ವಿರುದ್ಧ ಎಚ್ಚರಿಕೆ ವಹಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
ಕೆಎಸ್ಸಾರ್‌ರ್ಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಿವಿ ಕಾಲೇಜಿನ ಎನೆಸ್ಸೆಸ್, ಹ್ಯೂಮನ್ ರೈಟ್ಸ್ ಹ್ಯುಮಾನಿಟೀಸ್ ಮತ್ತು ಮೀಡಿಯಾ ಕ್ಲಬ್ ಆಶ್ರಯದಲ್ಲಿ ವಿವಿ ಕಾಲೇಜಿನಲ್ಲಿ ಸೋಮವಾರ ನಡೆದ ‘ಹದಿಹರೆಯ, ಮಾದಕ ವ್ಯಸನ ಮತ್ತು ಕಾನೂನು’ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕುಲವನ್ನೇ ಅಧಃಪತನಕ್ಕೆ ಕೊಂಡೊಯ್ಯುವ ಮಾದಕ ವಸ್ತುಗಳು ಕಪ್ಪು ಮಾರುಕಟ್ಟೆಗೆ ಬರಲು ಮಾನವನ ಸ್ವಾರ್ಥ ಸಹಿತ ಬದುಕು ಕಾರಣವಾಗಿದೆ. ವಿದ್ಯಾರ್ಥಿಗಳು ಸುಲಭವಾಗಿ ಈ ಜಾಲಕ್ಕೆ ಬಲಿ ಬೀಳುತ್ತಿರುವುದರಿಂದ ಆತಂಕಕಾರಿ ಸಂಗತಿಯಾಗಿದೆ. ದ.ಕ. ಜಿಲ್ಲೆಯ ಬಹುತೇಕ ಶಿಕ್ಷಣ ಸಂಸ್ಥೆಗಳ ಶೇ.2-5ರಷ್ಟು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಜಿಲ್ಲೆಯ ದೃಷ್ಟಿಯಿಂದ ಇದು ಕಳವಳಕಾರಿಯಾ ವಿಷಯವಾಗಿದೆ. ಇದನ್ನು ತಡೆಯಲು ಸಂಘಟಿತ ಪ್ರಯತ್ನ ಆಗಬೇಕಿದೆ. ಇದರೊಂದಿಗೆ ವಿದ್ಯಾರ್ಥಿ ಸಮುದಾಯ ಇದರ ಬಾಧಕಗಳನ್ನು ಸ್ಪಷ್ಟವಾಗಿ ಅರಿತುಕೊಂಡು ಮಾದಕ ವ್ಯಸನದ ದಾಸರಾಗದಂತೆ ಎಚ್ಚರವಹಿಸಬೇಕು ಎಂದು ಕಡ್ಲೂರು ಸತ್ಯನಾರಾಯಣಾಚಾರ್ಯ ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ. ಉದಯಕುಮಾರ್ ಎಂ.ಎ. ವ್ಯಸನ, ಶ್ರೀಮಂತಿಕೆ, ಸೌಂದರ್ಯದ ಅಮಲಿಗೆ ಬಲಿಯಾಗುವ ಮನುಷ್ಯ ತನ್ನ ಜೀವನವನ್ನು ತಾನೇ ನಾಶ ಮಾಡಿಕೊಳ್ಳುತ್ತಾನೆ. ಕ್ಷಣಿಕ ತೃಪ್ತಿಗಾಗಿ ಇಂತಹವುಗಳ ದಾಸರಾಗದೆ ಜೀವನದಲ್ಲಿ ಶಾಶ್ವತ ತೃಪ್ತಿ ಕೊಡುವ ಜ್ಞಾನ, ವಿವೇಚನೆ, ಆಲೋಚನಾ ಕ್ರಮ ರೂಢಿಸಿಕೊಂಡರೆ ಬದುಕು ಸ್ವರ್ಗವಾಗುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ. ಗಂಗಾಧರ್, ಎನ್‌ಎಸ್‌ಸಿಡಿಎ್ ಅಧ್ಯಕ್ಷ ಗಂಗಾಧರ್ ಗಾಂಧಿ, ನ್ಯಾಯವಾದಿ ಉದಯಾನಂದ ಎ., ಮಾನವ ಹಕ್ಕುಗಳ ಸಂಘದ ಸಂಯೋಜಕಿ ಡಾ.ಲತಾ ಎ. ಪಂಡಿತ್, ಮಾಧ್ಯಮ ವೇದಿಕೆಯ ಸಂಯೋಜಕಿ ಡಾ. ಶಾನಿ ಕೆ.ಆರ್., ಮಾನವಿಕ ಸಂಘದ ಸಂಯೋಜಕ ಡಾ. ಕುಮಾರಸ್ವಾಮಿ, ಎನೆಸ್ಸೆಸ್ ಕಾರ್ಯಕ್ರಮ ಸಂಯೋಜಕರಾದ ಡಾ. ಗಾಯತ್ರಿ ಎನ್., ಡಾ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











