ಬಿಜೆಪಿಯ ಷಡ್ಯಂತ್ರಕ್ಕೆ ಜಿಲ್ಲೆಯ ಜನತೆ ಬಲಿಯಾಗದಂತೆ ಎಸ್‌ಡಿಪಿಐ ಕರೆ
ಮಂಗಳೂರು, ಜ.6: ಸಿಎಎ, ಎನ್‌ಆರ್‌ಸಿ ವಿಚಾರವಾಗಿ ಬಿಜೆಪಿಯು ದೇಶಾದ್ಯಂತ ಜಾಗೃತಿ ಅಭಿಯಾನದ ಹೆಸರಿನಲ್ಲಿ ಮನೆ ಮನೆ ಭೇಟಿ ನೀಡಿ ಸುಳ್ಳುಗಳನ್ನೇ ಮುದ್ರಿಸಿರುವ ಕರಪತ್ರಗಳನ್ನು ಹಂಚಿ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ. ಎನ್‌ಆರ್‌ಸಿ, ಸಿಎಎ ಕಾಯ್ದೆಯಲ್ಲಿರುವ ವಾಸ್ತವಾಂಶಗಳನ್ನು ಮರೆಮಾಚುವುದರ ಮೂಲಕ ಸುಳ್ಳುಗಳನ್ನು ಜನರ ಮನಸ್ಸಿನಲ್ಲಿ ಬೇರೂರುವಂತೆ ಮಾಡಿ ಬಿಜೆಪಿ ಸರಕಾರದ ವಿರುದ್ಧದ ಆರೋಪಗಳನ್ನು ಮತ್ತು ಆಡಳಿತ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ಸರಕಾರ ಮಾಡುತ್ತಿರುವ ಅಭಿಯಾನ ಇದಾಗಿದೆ. ಹಾಗಾಗಿ ಇದರ ಬಗ್ಗೆ ಜಿಲ್ಲೆಯ ಜನತೆ ಎಚ್ಚರಿಕೆ ವಹಿಸುವಂತೆ ಎಸ್‌ಡಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಕರೆ ನೀಡಿದ್ದಾರೆ.
ಎನ್‌ಆರ್‌ಸಿ, ಸಿಎಎ ಪರವಾದ ಅಭಿಯಾನವೆಂದು ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡುವ ಸಂದರ್ಭ ಎನ್‌ಆರ್‌ಸಿ ಬಗ್ಗೆ ಉಲ್ಲೇಖ ಮಾಡದೆ ಕೇವಲ ಸಿಎಎ ಬಗ್ಗೆ ಹೇಳಿ ಇದರಿಂದ ದೇಶಕ್ಕೆ ಯಾವುದೇ ಅಪಾಯವಿಲ್ಲ ಎನ್ನುತ್ತಿದ್ದಾರೆ. ಆದರೆ ಈ ಕಾಯ್ದೆಗಳು ದೇಶದ ಸಂವಿಧಾನದ ತತ್ವಗಳಿಗೆ ಮತ್ತು ಆಶಯಗಳಿಗೆ ವಿರುದ್ಧವಾದುದಾಗಿದೆ. ಹಾಗಾಗಿ ಬಿಜೆಪಿ ಕಾರ್ಯಕರ್ತರು ಮನೆಗೆ ಬರುವ ಸಮಯದಲ್ಲಿ ಯಾರು ಕೂಡ ಇದಕ್ಕೆ ಯಾವುದೇ ರೀತಿಯಿಂದಲೂ ಸಹಕರಿಸಬಾರದು. ಅವರು ನೀಡುವ ನಂಬರ್‌ಗಳಿಗೆ ಮಿಸ್ಕಾಲ್ ಮಾಡಬಾರದು. ಅವರೊಂದಿಗೆ ನಿಂತು ಫೋಟೋ ತೆಗೆಯಲು ಅವಕಾಶ ನೀಡಬಾರದು ಎಂದು ತಿಳಿಸಿರುವ ಇಕ್ಬಾಲ್ ಬೆಳ್ಳಾರೆ, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಿಎಎಗೆ ಎಲ್ಲಾ ಧರ್ಮದವರ ಬೆಂಬಲವಿದೆಯೆಂದು ಕಥೆಕಟ್ಟಿ ಮತ್ತು ಸುಪ್ರೀಂ ಕೋರ್ಟ್‌ಗೆ ದಾಖಲೆಯಾಗಿ ದುರುಪಯೋಗಿಸಿ ರಾಜಕೀಯ ಲಾಭ ತೆಗೆಯುವ ಸಾದ್ಯತೆ ಇದೆ ಎಂದಿದ್ದಾರೆ.







