ಜ.8ರಂದು 25 ಕೋಟಿ ಜನರಿಂದ ರಾಷ್ಟ್ರವ್ಯಾಪಿ ಮುಷ್ಕರ: ಕಾರ್ಮಿಕ ಒಕ್ಕೂಟಗಳು
ಸರಕಾರದ ವಿರುದ್ಧ ಪ್ರತಿಭಟನೆ

ಹೊಸದಿಲ್ಲಿ,ಜ.6: ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲು ಜ.8ರಂದು ಹಮ್ಮಿಕೊಳ್ಳಲಾಗಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸಲಿದ್ದಾರೆ ಎಂದು 10 ಕೇಂದ್ರ ಕಾರ್ಮಿಕ ಸಂಘಟನೆಗಳು ಸೋಮವಾರ ತಿಳಿಸಿವೆ.
ಮುಷ್ಕರದಲ್ಲಿ ಕನಿಷ್ಠ 25 ಕೋಟಿ ದುಡಿಯುವ ವರ್ಗ ಭಾಗಿಯಾಗಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ. ಸರಕಾರದ ಕಾರ್ಮಿಕ ವಿರೋಧಿ,ಜನವಿರೋಧಿ ಮತ್ತು ರಾಷ್ಟ್ರವಿರೋಧಿ ನೀತಿಗಳನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಇನ್ನಷ್ಟು ಕ್ರಮಗಳನ್ನು ನಾವು ತೆಗೆದುಕೊಳ್ಳಲಿದ್ದೇವೆ. ಜ.2ರಂದು ಸಭೆಯನ್ನು ಕರೆದಿದ್ದ ಕಾರ್ಮಿಕ ಸಚಿವಾಲಯವು ಕಾರ್ಮಿಕ ಯಾವುದೇ ಬೇಡಿಕೆಗಳ ಕುರಿತು ಭರವಸೆ ನೀಡಲು ವಿಫಲಗೊಂಡಿದೆ ಎಂದು ಇಂಟಕ್, ಐಟಕ್, ಎಐಯುಟಿಯುಸಿ, ಸಿಟು,ಎಚ್‌ಎಂಎಸ್ ಸೇರಿದಂತೆ ಹತ್ತು ಕಾರ್ಮಿಕ ಒಕ್ಕೂಟಗಳು ಸೋಮವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಸುಮಾರು 60 ವಿದ್ಯಾರ್ಥಿ ಸಂಘಟನೆಗಳು ಮತ್ತು ಕೆಲವು ವಿವಿಗಳ ಚುನಾಯಿತ ವಿದ್ಯಾರ್ಥಿ ಪದಾಧಿಕಾರಿಗಳು ಹೆಚ್ಚಿಸಿರುವ ಶುಲ್ಕಗಳು ಮತ್ತು ಶಿಕ್ಷಣದ ವಾಣಿಜ್ಯೀಕರಣದ ವಿರುದ್ಧ ಧ್ವನಿಯೆತ್ತುವ ಅಜೆಂಡಾದೊಂದಿಗೆ ಮುಷ್ಕರದಲ್ಲಿ ಕೈಜೋಡಿಸಲು ನಿರ್ಧರಿಸಿವೆ ಎಂದೂ ತಿಳಿಸಿರುವ ಹೇಳಿಕೆಯು,ಜಿಎನ್‌ಯು ಹಿಂಸಾಚಾರ ಮತ್ತು ಇತರ ವಿವಿ ಕ್ಯಾಂಪಸ್‌ಗಳಲ್ಲಿ ಇಂತಹುದೇ ಘಟನೆಗಳನ್ನು ಖಂಡಿಸಿದೆ. ಕಾರ್ಮಿಕ ಒಕ್ಕೂಟಗಳು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಏಕತೆಯನ್ನು ವ್ಯಕ್ತಪಡಿಸಿವೆ.
175ಕ್ಕೂ ಅಧಿಕ ರೈತರ ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳು ಮುಷ್ಕರವನ್ನು ಬೆಂಬಲಿಸಲಿದ್ದು,ತಮ್ಮ ಬೇಡಿಕೆಗಳೊಂದಿಗೆ ಜ.8ನ್ನು ಗ್ರಾಮಿಣ ಭಾರತ ಬಂದ್ ದಿನವನ್ನಾಗಿ ಆಚರಿಸಲಿವೆ ಎಂದು ಹೇಳಿಕೆಯು ತಿಳಿಸಿದೆ.







