‘ಅದಮಾರು ಕಿರಿಯ ಶ್ರೀಗಳಿಂದ ಪರ್ಯಾಯ ಪೀಠಾರೋಹಣ’
ಶ್ರೀವಿಶ್ವಪ್ರಿಯ ತೀರ್ಥರಿಂದ ಘೋಷಣೆ

ಉಡುಪಿ, ಜ. 6: ಜ.18ರ ಮುಂಜಾನೆ ನಡೆಯುವ ಅದಮಾರು ಪರ್ಯಾಯದಲ್ಲಿ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರು ಸರ್ವಜ್ಞ ಪೀಠಾರೋಹಣ (ಪರ್ಯಾಯ ದೀಕ್ಷೆ) ಮಾಡಲಿದ್ದಾರೆ ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಘೋಷಿಸಿದ್ದಾರೆ.
ಪಡುಬಿದ್ರಿ ಸಮೀಪದ ಅದಮಾರುವಿನಲ್ಲಿರುವ ಅದಮಾರು ಮೂಲ ಮಠದಲ್ಲಿ ಇಂದು ಸಂಜೆ ಶ್ರೀಈಶಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ಈ ಮೂಲಕ ಕಳೆದ ಒಂದು ವರ್ಷದಿಂದ ಮುಂದಿನ ಅದಮಾರು ಪರ್ಯಾಯದಲ್ಲಿ ಯಾರು ಪರ್ಯಾಯ ಪೀಠವನ್ನೇರಲಿದ್ದಾರೆ ಎಂಬ ಬಗ್ಗೆ ಮಠದ ಭಕ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಮೂಡಿದ್ದ ಕುತೂಹಲಕ್ಕೆ ಕೊನೆಗೂ ಶ್ರೀಗಳು ತೆರೆ ಎಳೆದಿದ್ದಾರೆ.
ತಮ್ಮ ಗುರುಗಳಾದ ಶ್ರೀವಿಭುದೇಶ ತೀರ್ಥರು 1956-58ರಲ್ಲಿ ತಮ್ಮ ಮೊದಲ ಪರ್ಯಾಯ ಹಾಗೂ 72-74ರಲ್ಲಿ ಎರಡನೇ ಪರ್ಯಾಯ ಮಾಡಿದ್ದರು. 1988-90ರ ಪರ್ಯಾಯವನ್ನು ಅವರು ನನ್ನಿಂದ ಮಾಡಿಸಿದ್ದರು. ಮುಂದೆ 2004-06ರ ಪರ್ಯಾಯವನ್ನೂ ನಾನೇ ಮಾಡಿದ್ದೇನೆ. ನನ್ನ ಗುರುಗಳ ಹಾಕಿಕೊಟ್ಟ ಸಂಪ್ರದಾಯದಂತ ಎರಡು ಪರ್ಯಾಯಗಳನ್ನು ನಾನೇ ನಡೆಸಿದ ಬಳಿಕ ಇದೀಗ ಮೂರನೇ ಪರ್ಯಾಯವನ್ನು ಶಿಷ್ಯನಿಗೆ (ಶ್ರೀಈಶಪ್ರಿಯ ತೀರ್ಥ) ಬಿಟ್ಟುಕೊಡುತಿದ್ದೇನೆ. ಅದಮಾರು ಮಠದ ಪರಂಪರೆ ಉಳಿದು ಕೃಷ್ಣನ ಮಹಾಪೂಜೆ ಚೆನ್ನಾಗಿ ಆಗಬೇಕೆಂಬುದು ನಮ್ಮ ಆಶಯ ಎಂದರು.
ಪರ್ಯಾಯ ಪೀಠವೇರಲು ಶಿಷ್ಯನನ್ನು ಒಪ್ಪಿಸಲು ನನಗೆ ತುಂಬಾ ಕಷ್ಟವಾಯಿತು. ಕೊನೆಗೆ ಇದು ನನ್ನ ಆಜ್ಞೆ, ನೀವು ಪರಿಪಾಲಿಸಲೇ ಬೇಕು ಎಂದು ಹೇಳಿದ ಮೇಲೆ ಅವರು ‘ಅಪ್ಪಣೆ’ ಎಂದರು ಎಂದು ಶ್ರೀವಿಶ್ವಪ್ರಿಯತೀರ್ಥರು ನುಡಿದರು.
ಅದಮಾರು ಪರ್ಯಾಯದ ಕುರಿತಂತೆ ಜನರು ವಿವಿಧ ವೇದಿಕೆಗಳಲ್ಲಿ ಏನೇನೊ ಮಾತನಾಡಿಕೊಳ್ಳುತಿದ್ದಾರೆ. ಇನ್ನು ಮುಂದೆ ಅವೆಲ್ಲವೂ ನಿಲ್ಲಬೇಕು. ದಾಸರು ಹೇಳಿದಂತೆ ‘ಆಚಾರವಿಲ್ಲದ ನಾಲಗೆ’ ಏನೇನೊ ಆಡಿಕೊಳ್ಳುತ್ತೆ. ಆದರೆ ಯಾರೂ ತಮಗೆ ಸಂಬಂಧಪಡದ ವಿಷಯಗಳ ಬಗ್ಗೆ ಮಾತನಾಡಬಾರದು. ಮಾತನಾಡಿದರೂ ಹಿಂದು-ಮುಂದಿನ ವಿಚಾರ ತಿಳಿಯದೇ ಏನೇನೋ ಆಡಬಾರದು ಎಂದು ಸ್ವಾಮೀಜಿ, ಇನ್ನು ಮುಂದೆ ಸಮಾಜ ಪೀಠದ ಬಗ್ಗೆ ಮಾತನಾಡುವಾಗ ವಿಮರ್ಶೆ ಮಾಡಿ ಮಾತನಾಡಬೇಕು ಎಂದು ನುಡಿದರು.
ಪರ್ಯಾಯದಲ್ಲಿ ಉಪಸ್ಥಿತಿ ಇಲ್ಲ: ಜ.8ರಂದು ನಡೆಯುವ ಪುರಪ್ರವೇಶ ಸಂದರ್ಭದಲ್ಲಿ ಶಿಷ್ಯರು ಮಾತ್ರ ಇರುತ್ತಾರೆ. ನಾನು ಇರುವುದಿಲ್ಲ. ಅದೇ ರೀತಿ ಪರ್ಯಾಯ ಮೆರವಣಿಗೆಯಲ್ಲಿ, ಪರ್ಯಾಯ ದರ್ಬಾರ್‌ನಲ್ಲಿ ಕೂಡಾ ನಾನು ಭಾಗವಹಿಸುವುದಿಲ್ಲ. 2004-06ರ ನನ್ನ ಪರ್ಯಾಯದ ಬಳಿಕ ನಾನು ಪರ್ಯಾಯ ಮೆರವಣಿಗೆ, ದರ್ಬಾರ್‌ಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಅವರು ಹೇಳಿದರು.
ಪೀಠಾರೋಹಣವನ್ನು ಶಿಷ್ಯರೊಬ್ಬರೇ ಮಾಡುತ್ತಾರೆ. ನಾನು ಅದಮಾರು ವಿದ್ಯಾಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳುತ್ತೇನೆ. ಆಗಾಗ ಮಠಕ್ಕೆ ಬಂದು ಹೋಗುತ್ತಿರುತ್ತೇನೆ. ಸಲಹೆ-ಸೂಚನೆಗಳನ್ನು ನೀಡುತ್ತೇನೆ. ಕೆಲವು ಪೂಜೆಗಳಲ್ಲಿ ಶ್ರೀಗಳಿಗೆ ಸಹಕರಿಸುತ್ತೇನೆ ಎದು ಶ್ರೀವಿಶ್ವಪ್ರಿಯ ತೀರ್ಥರು ವಿವರಿಸಿದರು.
ಶ್ರೀಕೃಷ್ಣ ಮಠದ ಪರ್ಯಾಯ ಸಂಪ್ರದಾಯದಂತೆ ಪ್ರತಿದಿನ ನಡೆಯುವ 16 ಪೂಜೆಗಳಲ್ಲಿ ಬೆಳಗ್ಗೆ ನಡೆಯುವ ಅವಸರಸನಕಾಧಿ ಪೂಜೆ, ಮಹಾಪೂಜೆ ಹಾಗೂ ರಾತ್ರಿ ಚಾಮರ ಸೇವೆಯನ್ನು ಪರ್ಯಾಯ ಶ್ರೀಗಳೇ ಮಾಡಬೇಕು. ಅಲಂಕಾರ ಪೂಜೆ ಸೇರಿದಂತೆ ಉಳಿದ ಪೂಜೆಗಳಲ್ಲಿ ಅಷ್ಟಮಠಗಳ ಸ್ವಾಮೀಜಿಗಳು ಅವರಿಗೆ ನೆರವಾಗುತ್ತಾರೆ. ಕೆಲವೊಮ್ಮೆ ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದರು.
ಗುರುಗಳ ಆಜ್ಞೆಯಂತೆ ಕೃಷ್ಣ ಪೂಜೆ
ನಮ್ಮ ಗುರುಗಳು ಆಜ್ಞೆ ಮಾಡಿದಂತೆ ನಾವು ಈ ಬಾರಿ ಪರ್ಯಾಯ ಪೀಠವೇರಲು, ಕೃಷ್ಣನ ಪೂಜೆಗೆ ಒಪ್ಪಿಕೊಂಡಿದ್ದೇವೆ. ಎಲ್ಲವನ್ನೂ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನಡೆಸಿಕೊಂಡು ಹೋಗುತ್ತೇವೆ. ಹಿಂದಿನ ಎಲ್ಲಾ ಆಚರಣೆ ಗಳನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗುತ್ತೇವೆ.ಹಿಂದಿನ ಪರ್ಯಾಯದ ಆಚರಣೆಗಳು ಅಗತ್ಯ ಎಂದು ಕಂಡುಬಂದರೆ ಮುಂದುವರಿಸುವ ಬಗ್ಗೆ ಯೋಚಿಸಲಾಗುವುದು. ಸಂಪ್ರದಾಯವನ್ನು ಚೆನ್ನಾಗಿ ಅರಿತು ಮಾಡಿದಾಗ ಒಳ್ಳೆಯ ಸಂದೇಶಗಳು ಎಲ್ಲರಿಗೂ ತಲುಪುತ್ತದೆ ಎಂದು ಪರ್ಯಾಯ ಪೀಠವೇರುವ ಶ್ರೀಈಶಪ್ರಿಯ ತೀರ್ಥರು ತಿಳಿಸಿದರು.








