ಎಎಸ್‌ಎನ್ ಹಿಂದಿ ಚಿತ್ರ ಶೀಘ್ರವೇ ಬಿಡುಗಡೆಗೆ ಪ್ರಯತ್ನ: ರಕ್ಷಿತ್ ಶೆಟ್ಟಿ

ಉಡುಪಿ, ಜ.6:‘ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುವ ದಿನ ಇನ್ನೂ ನಿಗದಿಯಾಗಿಲ್ಲ. ಈ ಕುರಿತು ಹೆಚ್ಚಿನ ಬೇಡಿಕೆ ಬರುತ್ತಿರುವುದರಿಂದ ಶೀಘ್ರವೇ ಬಿಡುಗಡೆಗೆ ಪ್ರಯತ್ನಿಸಲಾಗುವುದು’ ಎಂದು ಚಿತ್ರದ ನಟ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಚಿತ್ರದ ತಂಡ ಉಡುಪಿಯ ಕಲ್ಪನ ಚಿತ್ರಮಂದಿರಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದರು.
ಮಲಯಾಳಂ, ತಮಿಳು, ತೆಲುಗು ಭಾಷೆಯ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊರ ರಾಜ್ಯದಲ್ಲಿಯೂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನನ್ನ ಮುಂದಿನ ಚಿತ್ರ ‘ಪುಣ್ಯಕೋಟಿ’ ಕೂಡ ಸ್ವಲ್ಪ ಫ್ಯಾಂಟಸಿ,ಫಿಕ್ಷನ್ ಕಾನ್ಸೆಪ್ಟ್‌ನಲ್ಲಿ ಮೂಡಿಬರಲಿದೆ ಎಂದು ಅವರು ತಿಳಿಸಿದರು.
ಚಿತ್ರ ನಿರ್ದೇಶಕ ಸಚಿನ್ ಮಾತನಾಡಿ, ನಿರ್ದೇಶಕನಾಗಿ ನನ್ನ ಮೊದಲ ಚಿತ್ರ ಇದಾಗಿದ್ದು, ಮೊದಲ ಚಿತ್ರವೆ ಯಶಸ್ಸು ತಂದುಕೊಟ್ಟಿದ್ದು ಖುಷಿಯಾಗಿದೆ. ಫ್ಯಾಂಟಸಿ ಫಿಕ್ಷನ್ ಕಾನ್ಸೆಪ್ಟ್‌ನ್ನು ಜನರು ಇಷ್ಟಪಟ್ಟಿದ್ದಾರೆ. ಮುಂದಿನ ಚಿತ್ರದ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದರು.
ಬಳಿಕ ನಟ, ನಿರ್ದೇಶಕರು ಸೇರಿದಂತೆ ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್, ನಟರಾದ ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ ಪ್ರೇಕ್ಷರೊಂದಿಗೆ ಅಭಿಪ್ರಾಯ ಹಂಚಿಕೊಂಡರು.





