ಜೆಎನ್ ಯು ಹಿಂಸಾಚಾರ: ಎಬಿವಿಪಿ ನಿಷೇಧಕ್ಕೆ ವಿದ್ಯಾರ್ಥಿನಿಯರ ಪಟ್ಟು
ಬೆಂಗಳೂರು, ಜ.6: ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನಿಷೇಧಿಸಬೇಕೆಂದು ಆಗ್ರಹಿಸಿದರು.
ಸೋಮವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಎನ್‌ಎಸ್‌ಯುಐ ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿನಿಯರು, ಹೊಸದಿಲ್ಲಿಯಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ಸಂಜೆ ಕ್ಯಾಂಪಸ್‌ನಲ್ಲಿ ವಸತಿ ನಿಲಯಕ್ಕೆ ನುಗ್ಗಿದ್ದ ಕೆಲವು ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಐಶೆ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಆಕೆಯ ಜೊತೆಗಿದ್ದ ಇತರೆ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವರ್ಗದವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಹಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯನ್ನು ಇಡೀ ದೇಶ ಒಮ್ಮತದಿಂದ ವಿರೋಧಿಸಿದೆ, ವ್ಯಾಪಕ ಖಂಡನೆ ಎದುರಾಗುತ್ತಿದೆ ಎಂದು ಅವರು ಹೇಳಿದರು.
ಈ ಘಟನೆಯ ಹಿಂದೆ ಎಬಿವಿಪಿ ಹಾಗೂ ಬಿಜೆಪಿ ಗೂಂಡಾಗಳ ಕೈವಾಡ ಇದೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು. ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ಎಚ್.ಎಸ್.ಮಂಜುನಾಥ ಸೇರಿದಂತೆ ಪ್ರಮುಖರಿದ್ದರು







