ಸಿಎಎ ಪ್ರತಿಭಟನೆಯಿಂದ ಉಗ್ರರಿಗೆ ರಕ್ಷಣೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜ.6: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನೋಂದಣಿ ಕಾಯ್ದೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುವುದರಿಂದ ದೇಶ ವಿರೋಧಿ ಹಾಗೂ ಉಗ್ರಗಾಮಿಗಳಿಗೆ ರಕ್ಷಣೆ ನೀಡಿದಂತೆ ಆಗುತ್ತಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಮಟ್ಟದ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಅಭಿಯಾನಕ್ಕೆ ಸೋಮವಾರ ಪಕ್ಷದ ಉಡುಪಿ ಕಚೇರಿಯಲ್ಲಿ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಭಾರತದ ಗಡಿ ದಾಟಿ ಬರುವ ಭಯೋತ್ಪಾದಕರಿಗೆ ಈ ಕಾಯ್ದೆಯಿಂದ ತೊಂದರೆಯಾಗಿದೆ. ರಾಷ್ಟ್ರದ ಭದ್ರತೆ, ಏಕೀಕರಣ, ಪ್ರಜೆಗಳ ಸುರಕ್ಷತೆಯ ದೃಷ್ಠಿ ಯಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದುದರಿಂದ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ಈ ಕಾಯ್ದೆಗೆ ಒಪ್ಪಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಜ.19ರಂದು ಮಂಗಳೂರಿನಲ್ಲಿ ವಿಭಾಗದ ಮಟ್ಟದ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಅಭಿಯಾನ ನಡೆಯಲಿದ್ದು, ಇದರಲ್ಲಿ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ನಿರೀಕ್ಷೆ ಇದೆ. ಇದರಲ್ಲಿ ಒಂದು ಲಕ್ಷ ಜನ ಸೇರಲಿದ್ದು, ಉಡುಪಿ ಜಿಲ್ಲೆಯ 20ರಿಂದ 30ಸಾವಿರ ಮಂದಿ ಭಾವಹಿಸಲಿರುವರು ಎಂದು ತಿಳಿಸಿದರು.
ಈ ಸಂದರ್ಭ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಜಿಪಂ ಸದಸ್ಯ ಗೀತಾಂಜಲಿ ಸುವರ್ಣ, ನಗರಸಭೆ ಸದಸ್ಯ ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







