ಜ.8ರ ಮುಷ್ಕರಕ್ಕೆ ಕೃಷಿಕೂಲಿಕಾರರ ಸಂಘ ಬೆಂಬಲ
ಉಡುಪಿ, ಜ.6: ವಿವಿಧ ಬೇಡಿಕೆಗಳಿಗಾಗಿ ಸುಮಾರು 200ಕ್ಕಿಂತ ಹೆಚ್ಚಿನ ರೈತ ಸಂಘಟನೆಗಳನ್ನು ಒಳಗೊಂಡು ರಚನೆ ಯಾಗಿರುವ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜ.8ರಂದು ಸುಮಾರು 21 ಬೇಡಿಕೆಗಳನ್ನು ಒತ್ತಾಯಿಸಿ ಕರೆ ನೀಡಿರುವ ಗ್ರಾಮೀಣ ಭಾರತ್ ಬಂದ್‌ಗೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ತಿಳಿಸಿದ್ದಾರೆ.
ಸಿಪಿಐಎಂ ಬೆಂಬಲ: 10 ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು 50ಕ್ಕೂ ಹೆಚ್ಚು ಸ್ವತಂತ್ರ ನೌಕರ ಸಂಘಟನೆಗಳು ಕರೆ ನೀಡಿರುವ ಜ.8ರ ಅಖಿಲ ಭಾರತ ಮುಷ್ಕರಕ್ಕೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ.
ಈ ಮುಷ್ಕರ ದೇಶಪ್ರೇಮಿ ನಡೆಯಾಗಿದ್ದು ಸಾರ್ವಜನಿಕ ಉದ್ದಿಮೆಗಳನ್ನು ರಕ್ಷಿಸುವ ಕರೆ ನೀಡಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ಮರಳು, ನಿವೇಶನ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕಾರ್ಮಿಕ ಸಂಘಟನೆಗಳು ಬೇಡಿಕೆ ಇಟ್ಟಿರುವುದು ಸಮಯೋಚಿತವಾಗಿದೆ. ಆದ್ದರಿಂದ ಎಲ್ಲಾ ಕಾರ್ಮಿಕರು ಈ ಮುಷ್ಕರವನ್ನು ಯಶಸ್ವಿಗೊಳಿಸಬೇಕು. ಹಾಗೆ ಜನರು ಬೆಂಬಲ ನೀಡಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





