ಜೆಎನ್‌ಯು ಕ್ಯಾಂಪಸ್‌ನಲ್ಲಿ ದಾಂಧಲೆಗೆ ಖಂಡನೆ
ಮಂಗಳೂರು, ಜ. 6: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನೊಳಗೆ ನುಗ್ಗಿದ ತಂಡವೊಂದು ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದು ದಾಂಧಲೆ ಎಸಗಿದ ಕೃತ್ಯವನ್ನು ವಿವಿಧ ಸಂಘಟನೆ ಮತ್ತು ಪಕ್ಷ ಖಂಡಿಸಿವೆ.
ಡಿವೈಎಫ್‌ಐ: ಉಳ್ಳಾಲ ವಲಯ ಡಿವೈಎಫ್‌ಐ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್ ಮತ್ತು ಕಾರ್ಯದರ್ಶಿ ಸುನೀಲ್ ತೇವುಲ ಹೇಳಿಕೆ ಯೊಂದನ್ನು ನೀಡಿ ದೇಶಾದ್ಯಂತ ಕೇಂದ್ರ ಸರಕಾರದ ನೀತಿಗಳ ವಿರುದ್ಧ ವಿದ್ಯಾರ್ಥಿಗಳು, ಯುವಜನರು, ಸಾರ್ವಜನಿಕರು ಬೀದಿಗಿಳಿದಿದ್ದು ಇದರಿಂದ ಸಹನೆ ಕಳೆದುಕೊಂಡಿರುವ ಫ್ಯಾಸಿಸ್ಟ್ ಸರಕಾರ ತನ್ನ ಸಹ ಸಂಘಟನೆಗಳು ಮತ್ತು ಪೊಲೀಸರ ಮೂಲಕ ಚಳುವಳಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದರ ಭಾಗವಾಗಿಯೇ ದೆಹಲಿ ಜವಹರಲಾಲ್ ನೆಹರೂ ವಿವಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲಾಗಿದೆ. ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವ ಅಮಿತ್ ಶಾ ರಾಜಿನಾಮೆ ನೀಡಬೇಕು. ಸರಕಾರ ಕೊಡಲೇ ವಿದ್ಯಾರ್ಥಿಗಳು ಮತ್ತು ಚಳುವಳಿಗಾರರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಪಿಐ: ಹಾಸ್ಟೆಲ್ ಶುಲ್ಕ ಹೆಚ್ಚಳ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ವಿರುದ್ಧ ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕೃತ್ಯವು ಖಂಡನೀಯ. ಸೈದ್ಧಾಂತಿಕವಾಗಿ ವಿಚಾರಗಳನ್ನು ಎದುರಿಸಲಾಗದೆ ತನ್ನ ಪರಿವಾರ ಸಂಘಟನೆಗಳ ಮೂಲಕ ಗೂಂಡಾಗಿರಿ ನಡೆಸಿ ಹೋರಾಟಗಾರರನ್ನು ದಮನಿಸಲು ಕೇಂದ್ರ ಸರಕಾರ ಹೊರಟಿದೆ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಿ. ಕುಕ್ಯಾನ್ ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಕಮಿಟಿ: ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ದೇಶಾದ್ಯಂತ ಚಳುವಳಿ ತೀವ್ರಗೊಂಡಿದ್ದರಿಂದ ಹತಾಶೆ ಗೊಂಡಿರುವ ಸಂಘ ಪರಿವಾರವು ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿ ಯುವ ಸಮೂಹವನ್ನು ಗುರಿಯಾಗಿಸಿಕೊಂಡು ವಿವಿಯ ಕ್ಯಾಂಪಸ್‌ನೊಳಗೆ ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.







