ಜ.8ರ ಮುಷ್ಕರದಲ್ಲಿ ಬಿಸಿಯೂಟ ನೌಕರರು ಭಾಗಿ
ಮಂಗಳೂರು, ಜ.6: ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಜ.8ರಂದು ನಡೆಸುವ ಅಖಿಲ ಭಾರತ ಮುಷ್ಕರದಲ್ಲಿ ದ.ಕ.ಜಿಲ್ಲೆಯ ಬಿಸಿಯೂಟ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಮದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷೆ ಪದ್ಮಾವತಿ ಎಸ್. ಶೆಟ್ಟಿ ತಿಳಿಸಿದ್ದಾರೆ.
ಕೇಂದ್ರ ಸರಕಾರವು ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಲು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ತಯಾರಿಲ್ಲ. ರಾಷ್ಟ್ರ ಮಟ್ಟದ 12 ಬೇಡಿಕೆಗಳಲ್ಲಿ ಬಿಸಿಯೂಟ ನೌಕರರ ಬೇಡಿಕೆಗಳು ಕೂಡಾ ಸೇರ್ಪಡೆಯಾಗಿವೆ. ಕನಿಷ್ಟ ವೇತನ 21 ಸಾವಿರ ನಿಗದಿಪಡಿಸಬೇಕು, ಎಲ್ಲಾ ನೌಕರರಿಗೆ ಎಲ್‌ಐಸಿ ಆಧಾರಿತ ಪಿಂಚಣಿ ಜಾರಿಗೊಳಿಸಬೇಕು, ಯಾವುದೇ ಖಾಸಗಿ ಸಂಘ-ಸಂಸ್ಥೆಗಳಿಗೆ ಈ ಯೋಜನೆ ನೀಡಬಾರದು, ಎಲ್ಲಾ ನೌಕರರನ್ನು ಖಾಯಂ ಮಾಡಬೇಕು, ಬೆಲೆ ಏರಿಕೆ ನಿಯಂತ್ರಿಸಬೇಕು, ಜೀವನಾವಶ್ಯಕ ವಸ್ತುಗಳನ್ನು ಸಾರ್ವಜನಿಕರ ಪಡಿತರ ಮೂಲಕ ತರಿಸುವ ವ್ಯವಸ್ಥೆ ಜಾರಿ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.





