ಪನೀರ್: ವಾರ್ಷಿಕ ಹಬ್ಬದ ಪ್ರಸಾದ ಮೆರವಣಿಗೆ

ಉಳ್ಳಾಲ, ಜ. 6: ಹಿಂದಿನ ಕಾಲದಲ್ಲಿ ಒಂದು ಮನೆಯಲ್ಲಿ ಹಲವು ಮಕ್ಕಳಿದ್ದರೂ ಪರಸ್ಪರ ಹಂಚಿ ತಿನ್ನುವ ಪರಿಪಾಠ, ಪ್ರೀತಿ ಇತ್ತು. ಆದರೆ ಇಂದು ಒಂದಿಬ್ಬರು ಮಕ್ಕಳು ಇದ್ದರೂ ಕೂಡ ಸೌಹಾರ್ದ ವಾತಾವರಣ ಇಲ್ಲದ ದುಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಹಬ್ಬಗಳು ಕುಟುಂಬ ಸಂಬಂಧ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ನಿರ್ದೇಶಕ ಫಾ.ರೋಶನ್ ಕ್ರಾಸ್ತಾ ಅಭಿಪ್ರಾಯಪಟ್ಟರು.
ಪನೀರ್ ದಯಾಮಾತೆ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ರವಿವಾರ ನಡೆದ ಪ್ರಸಾದ ಮೆರವಣಿಗೆ ಮತ್ತು ದಿವ್ಯಬಲಿಪೂಜೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಅಂತರ್ಜಾಲ ಎನ್ನುವ ಮಾಯೆಯೊಳಗೆ ನಾವು ಮುಳುಗಿದ್ದೇವೆ. ಫೇಸ್‌ಬುಕ್‌ನಲ್ಲಿ ಸಾವಿರಾರು ಸ್ನೇಹಿತರು ಇರುತ್ತಾರೆ. ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾರೆ. ಆದರೆ ಅವರ ಪರಿಚಯವೂ ನಮಗೆ ಇರುವುದಿಲ್ಲ. ಎಲ್ಲೆಲ್ಲೋ ಇರುವವರನ್ನು ನಮ್ಮನ್ನು ಅಂತರ್ಜಾಲ ಎನ್ನುವುದು ಸಂಪರ್ಕಕ್ಕೆ ತಂದಿದ್ದರೂ ಪರಸ್ಪರ ಹತ್ತಿರ ಸೇರಿಸುವಲ್ಲಿ ವಿಫಲವಾಗಿದೆ ಎಂದು ವಿಷಾದಿಸಿದರು.
ದಿವ್ಯಬಲಿಪೂಜೆಯ ಪ್ರಧಾನ ಧರ್ಮಗುರುಗಳಾಗಿ ವ.ಫಾ.ವಿಜಯ್ ಟೆಲ್ಲಿಸ್, ಚರ್ಚಿನ ಧರ್ಮಗುರುಗಳು, ಫಾ.ಡೆನ್ನಿಸ್ ಸುವಾರಿಸ್ ಹಾಗೂ ದಿಯಾಕಾನ್ ಅಶ್ವಿನ್ ಡಿಸೋಜ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕೆಥೋಲಿಕ್ ಸಭಾದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಧರ್ಮ ಭಗಿನಿಯರು ಉಪಸ್ಥಿತರಿದ್ದರು.







