ಸಾಲಮನ್ನಾ ಪ್ರತಿಯೊಬ್ಬರಿಗೂ ಸಿಗುವ ತನಕ ಹೋರಾಟ ನಿಲ್ಲದು-ಕಿಶೋರ್ ಶಿರಾಡಿ
ಮಲೆನಾಡು ಜನಹಿತರಕ್ಷಣಾ ವೇದಿಕೆ ಪ್ರತಿಭಟನೆ

ಪುತ್ತೂರು : ಸಾಲಮನ್ನಾ ಯೋಜನೆಯ ಹಣ ಸಂಪೂರ್ಣವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ರೈತನಿಗೂ ಸಿಗುವ ತನಕ, ಪ್ರತಿಯೊಬ್ಬ ರೈತರಿಗೂ ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಶಿರಾಡಿ ಎಚ್ಚರಿಸಿದರು.
ಅವರು ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಪುತ್ತೂರಿನ ಮಿನಿವಿಧಾನ ಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಾಲಮನ್ನಾ ಯೋಜನೆಯ ಹಣವನ್ನು ಕೂಡಲೇ ಪ್ರತಿಯೊಬ್ಬ ರೈತರ ಖಾತೆಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.
ಹೋರಾಟ ನಡೆಸುವುದೇ ನಮ್ಮ ಉದ್ದೇಶವಲ್ಲ. ರೈತರ ಖಾತೆಗೆ ಸಾಲ ಮನ್ನಾ ಹಣ ಜಮೆ ಆಗಬೇಕು. ಯಾವುದೇ ರೈತನಿಗೆ ವಂಚನೆ ಆಗಬಾರದು ಎಂಬುವುದು ನಮ್ಮ ಹೋರಾಟದ ಉದ್ದೇಶ ಎಂದ ಅವರು ನಮ್ಮ ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು ಮತ್ತು ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಸಾಲ ಮನ್ನಾ ಯೋಜನೆಯ ಹಣವನ್ನು 15 ದಿನದೊಳಗಾಗಿ ರೈತರ ಖಾತೆಗೆ ಜಮೆ ಮಾಡುವುದಾಗಿ ಹೇಳಿದ್ದಾರೆ. ಆ ತನಕ ನಾವು ಕಾದು ನೋಡುತ್ತೇವೆ ಎಂದು ಅವರು ತಿಳಿಸಿದರು.
ಜನತಾ ಬಜಾರ್ ನಿರ್ದೇಶಕ ಪ್ರಸನ್ನ ಕೆ.ಎಣ್ಮೂರು, ಶಿರಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಗುಂಡ್ಯ, ವೇದಿಕೆಯ ಮುಖಂಡರಾದ ಮರ್ಕೋಸ್ ಅಡ್ಡೋಳೆ, ಜಯರಾಮ್ ಕಟ್ಟೆಮನೆ, ತೋಮಸ್ ಎನ್.ಪಿ.ಶಿರಾಡಿ, ದಾಮೋದರ್ ಗುಂಡ್ಯ,ಸತೀಶ್ ಕಲ್ಮಕಾರು,ಶೇಖರಪ್ಪ ಬೆಂಡೋಡಿ, ಚಂದ್ರಶೇಖರ್ ಕೊಲ್ಲಮೊಗರು, ಶಾರಿಕಾ ಪುಡಿಂಕಲ್, ಕಿರಣ್‍ಕುಮಾರ್ ಮಡ್ತಿಲ, ಭೋಜಪ್ಪ ಗುತ್ತಿಗಾರು ಮತ್ತಿತರರು ಇದ್ದರು.
ಪ್ರತಿಭಟನೆಯ ಬಳಿಕ ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಈ ಕುರಿತು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.







