ಎನ್‌ಆರ್‌ಸಿ ಸಂಯೋಜಕನ ಕೋಮುವಾದಿ ಹೇಳಿಕೆ: ವಿವರಣೆ ನೀಡುವಂತೆ ಸರಕಾರಕ್ಕೆ ಸುಪ್ರೀಂ ನಿರ್ದೇಶ

ಹೊಸದಿಲ್ಲಿ, ಜ. 6: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ರಾಜ್ಯ ಸಂಯೋಜಕರ ಕೋಮವಾದಿ ಹೇಳಿಕೆ ಆರೋಪದ ಕುರಿತು ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಅಸ್ಸಾಂ ಸರಕಾರಕ್ಕೆ ಸೂಚಿಸಿದೆ.
ರಾಜ್ಯ ಎನ್‌ಆರ್‌ಸಿ ಸಂಯೋಜಕ ನೀಡಿದ ಹೇಳಿಕೆಯನ್ನು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ನ್ಯಾಯಾಲಯದ ಗಮನಕ್ಕೆ ತಂದಾಗ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ‘‘ಅವರು ಹಾಗೆಲ್ಲಾ ಹೇಳಬಾರದು. ನೀವು (ಅಸ್ಸಾಂ ಸರಕಾರ) ಇದಕ್ಕೆ ವಿವರಣೆ ನೀಡಬೇಕು’’ ಎಂದರು.
ರಾಜ್ಯ ಎನ್‌ಆರ್‌ಸಿ ಸಂಯೋಜಕ ದೇವ್ ಶರ್ಮಾ ಅವರನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪೀಠ ವಿಚಾರಣೆ ನಡೆಸಿತು.
ಅಸ್ಸಾಂನ ಎನ್‌ಆರ್‌ಸಿಗೆ ಸಂಬಂಧಿಸಿ ಹಲವು ಮನವಿಗಳನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೀಠ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಕೋರಿ ಕೇಂದ್ರ ಹಾಗೂ ಅಸ್ಸಾಂ ಸರಕಾರಕ್ಕೆ ನೋಟಿಸು ಜಾರಿ ಮಾಡಿತ್ತು.
ಕೇಂದ್ರ ಹಾಗೂ ಅಸ್ಸಾಂ ಸರಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು.





