ಸಿಎಎ-ಎನ್‌ಆರ್‌ಸಿ ಮೂಲಕ ಕೋಮು ಭಾವನೆ ಕದಡುವ ಕೆಲಸ: ಶಾಸಕ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜ.6: ಕೇಂದ್ರದ ಬಿಜೆಪಿ ಸರ್ಕಾರ ಸಿಎಎ ಮತ್ತು ಎನ್ಆರ್ಸಿ ವಿಚಾರಗಳನ್ನು ಮುಂದಿಟ್ಟುಕೊಂಡು ಕೋಮು ಭಾವನೆ ಕದಡುವ ಕೆಲಸವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಅಲ್ಪಸಂಖ್ಯಾತರಿಗೆ ಬೆದರಿಕೆಯೊಡ್ಡಲಾಗುತ್ತಿದೆ. ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಕೂಡ ಅಲ್ಪ ಸಂಖ್ಯಾತರಿಗೆ ಬೇಸರಿಸುವ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ನವದೆಹಲಿಯ ಜೆ.ಎನ್.ಯು ನಲ್ಲಿ ಕಳೆದ ರಾತ್ರಿ ನಡೆದಿರುವ ದಾಳಿ ಘಟನೆ ಖಂಡನಾರ್ಹವಾದುದು ಎಂದರು.
ಇದೇ ವೇಳೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಸಿಎಎ ಮತ್ತು ಎನ್.ಆರ್.ಸಿ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ. ಎರಡು ಕಾಯ್ದೆಗಳ ಜಾರಿಯಿಂದ ಎದುರಾಗುವ ತೊಂದರೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಕೂಡ ಜನರಿಗೆ ಮನವರಿಕೆ ಮಾಡಿಕೊಡಲಿದೆ. ದೇಶದಲ್ಲಿರುವ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಸಿಎಎ ಹಾಗು ಎನ್.ಆರ್.ಸಿ ಕಾಯ್ದೆ ಜಾರಿಗೊಳಿಸುವ ತಂತ್ರವನ್ನು ಬಿಜೆಪಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಹಾಗೆಯೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ, ಜನಜಾಗೃತಿ ಅಭಿಯಾನದ ಹೆಸರಿನಲ್ಲಿ ಬಿಜೆಪಿಯವರು ಮನೆ ಮನೆಗೆ ತೆರಳಿ ಕರಪತ್ರ ಹಂಚುತ್ತಿರುವುದು ದೋಖಾ ಆಗಿದೆ. ಸರ್ಕಾರದ ತಪ್ಪುಗಳ ಬಗ್ಗೆ ಪ್ರಶ್ನೆ ಮಾಡುವವರಿಗೆ ದೇಶ ದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಶಾಸಕ ಸೋಮಶೇಖರ್ ರೆಡ್ಡಿಯವರಂತಹವರ ಮೂಲಕ ಬಿಜೆಪಿ ಮಾಡಿಸುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಾಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕೆಪಿಸಿಸಿ ಸದಸ್ಯ ಹೆಡತಲೆ ಮಂಜುನಾಥ್, ಕಾರ್ಯದರ್ಶಿ ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







