ವಿವಿಧ ಬೇಡಿಕೆಗಳ ಈಡೇರಿಕೆಗೆ ಅತಿಥಿ ಶಿಕ್ಷಕರ ಸಂಘ ಒತ್ತಾಯ
ಬೆಂಗಳೂರು, ಜ.6: ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೊಟ್ರೇಶ್ ಡಿ. ಒತ್ತಾಯಿಸಿದ್ದಾರೆ.
ಸೋಮವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 25 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಹಲವಾರು ವರ್ಷಗಳಿಂದ ಕೇವಲ 8 ಸಾವಿರ ರೂ.ಗೆ ಕರ್ತವ್ಯ ನಿರ್ವಹಿಸುತ್ತಿದ್ದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತ ಬಂದಿದ್ದೇವೆ. ನಮ್ಮ ಸೇವೆಯನ್ನು ರಾಜ್ಯ ಸರಕಾರ ಪರಿಗಣಿಸಿ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಅತಿಥಿ ಶಿಕ್ಷಕರ ಬಗ್ಗೆ ನಿರ್ಣಯ ಕೈಗೊಳ್ಳಬೇಕು, ಮಹಿಳಾ ಶಿಕ್ಷಕಿಯರಿಗೆ ವೇತನ ಸಹಿತ ಹೆರಿಗೆ ಸೌಲಭ್ಯ ಮಂಜೂರು ಮಾಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಪಿ.ಎಫ್ ಸೌಲಭ್ಯ ನೀಡಬೇಕು. ಅತಿಥಿ ಶಿಕ್ಷಕರನ್ನು ಮಾರ್ಚ್ 31ಕ್ಕೆ ತೆರವುಗೊಳಿಸಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.





