ಪರಿಸರದ ಬಗ್ಗೆ ನಿಮಗಿಂತ ಹೆಚ್ಚಿನ ಕಾಳಜಿ ನಮಗಿದೆ: ಹೈಕೋರ್ಟ್
ಕಬ್ಬನ್ ಪಾರ್ಕ್‌ನಲ್ಲಿ ಕಟ್ಟಡ ನಿರ್ಮಾಣ ವಿಚಾರ

ಬೆಂಗಳೂರು, ಜ.6: ಕಬ್ಬನ್ ಪಾರ್ಕ್‌ನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಪರಿಸರದ ಬಗ್ಗೆ ನಿಮಗಿಂತ ಹೆಚ್ಚಿನ ಕಾಳಜಿ ನಮಗಿದೆ. ಪಿಐಎಲ್ ಸದುದ್ದೇಶದಿಂದ ಕೂಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಹೈಕೋರ್ಟ್‌ಗೆ 2 ಲಕ್ಷ ಚದರಡಿ ಕಟ್ಟಡದ ತುರ್ತು ಅಗತ್ಯವಿದೆ. ತಳಮಹಡಿಯಲ್ಲಿ 400 ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಹಳೆ ಕಟ್ಟಡ ಬಳಸಿಕೊಳ್ಳಲು ಪ್ರಸ್ತಾಪವಿತ್ತು. ಸರಕಾರ ಒಪ್ಪಿದರೆ ಮಾತ್ರ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ನ್ಯಾಯಪೀಠವು ಅರ್ಜಿದಾರರಿಗೆ ತಿಳಿಸಿತು. ಈಗಾಗಲೇ ಇಂಧನ ಇಲಾಖೆ ಹಳೆ ಚುನಾವಣಾ ಆಯೋಗದ ಕಟ್ಟಡದಲ್ಲಿ 1 ಲಕ್ಷ ಚದರಡಿಗೆ ಸಮ್ಮತಿಸಿದೆ. ಉಳಿದ 1 ಲಕ್ಷ ಚದರಡಿ ಜಾಗಕ್ಕಾಗಿ ಪ್ರಯತ್ನ ನಡೆದಿದೆ. ಅಲ್ಲದೆ, ನಿಮ್ಮ ಪಿಐಎಲ್ ಕೂಡ ಸದುದ್ದೇಶದಿಂದ ಕೂಡಿಲ್ಲ ಎಂದ ನ್ಯಾಯಪೀಠವು, ಹೈಕೋರ್ಟ್ ಸಿಬ್ಬಂದಿ ತಳಮಹಡಿಯಲ್ಲಿ ಕೆಲಸ ಮಾಡುವುದು ಅಮಾನವೀಯಲ್ಲವೇ? ನ್ಯಾಯಾಂಗದ ಮೇಲಿನ ಟೀಕೆ ನ್ಯಾಯಸಮ್ಮತವಾಗಿರಬೇಕು. ಪರಿಸರ ಕಾಳಜಿ ಹೋರಾಟಗಾರರ ಏಕಸ್ವಾಮ್ಯವಲ್ಲ. ಸಾಂವಿಧಾನಿಕ ಆಯ್ಕೆಗಳಿರುವಾಗ ಪ್ರತಿಭಟನೆಗೆ ಅರ್ಥವಿಲ್ಲ ಎಂದು ಅರ್ಜಿಯನ್ನು ಇತ್ಯರ್ಥಪಡಿಸಿತು. ಇದೇ ವೇಳೆ ನ್ಯಾಯಪೀಠವು ಡಾ.ಬಿ.ಆರ್.ಅಂಬೇಡ್ಕರ್ ಅರ ಮಾತನ್ನು ಉಲ್ಲೇಖಿಸಿತು.





