ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಮಹೋತ್ಸವ- ನಾಲೇಜ್ ಎಕ್ಸ್‌ಪೋ

ಮಂಗಳೂರು, ಜ.7: ಕಣ್ಣೂರು ಎಜುಕೇಶನ್ ಟ್ರಸ್ಟ್‌ನ ಕಣ್ಣೂರು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯ 25ನೇ ವರ್ಷದ ಬೆಳ್ಳಿ ಮಹೋತ್ಸವ ಹಾಗೂ ನಾಲೇಜ್ ಎಕ್ಸ್‌ಪೋ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಹಮ್ಮಿಕೊಳ್ಳಲಾಯಿತು.
ಈ ನಾಲೇಜ್ ಎಕ್ಸ್‌ಪೋ ಮೂರು ದಿನಗಳವರೆಗೆ ಜರುಗಲಿದೆ.
ನಾಲೇಜ್ ಎಕ್ಸ್‌ಪೋ ಪ್ರದರ್ಶನವನ್ನು ಶಾಸಕ ಯು.ಟಿ.ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಣ್ಣೂರು ಎಜುಕೇಶನ್ ಟ್ರಸ್ಟ್‌ನಿಂದ ಆರಂಭವಾದ ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯು ಇಲ್ಲಿನ ಸುತ್ತಮುತ್ತಲಿನ ಪ್ರದೇಶ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಅತ್ಯುತ್ತಮ ಶಿಕ್ಷಣ ನೀಡುವಲ್ಲಿಯೂ ಸಂಸ್ಥೆ ಯಶಸ್ವಿಯಾಗಿದೆ. ಶಿಕ್ಷಕರು, ಪೋಷಕರ ಸಹಕಾರ, ಮಾರ್ಗದರ್ಶನ ಇದ್ದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ದೇಶ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.
ದೇಶಭಕ್ತಿ ಎಂದರೆ ರಸ್ತೆ ಬದಿ ನಿಂತು ಮೈಕ್‌ನಲ್ಲಿ ಬಾಯಿಗೆ ಬಂದಂತೆ ಬೈಯ್ಯುವುದಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರಜೆಗಳನ್ನಾಗಿಸುವುದೇ ದೇಶಪ್ರೇಮವಾಗಿದೆ. ಕಣ್ಣೂರು ಶಿಕ್ಷಣ ಸಂಸ್ಥೆಯು ಶಿಕ್ಷಕ ವರ್ಗ ಸೇರಿದಂತೆ ಎಲ್ಲ ಬಗೆಯ ಸೌಲಭ್ಯಗಳನ್ನು ಹೊಂದಿದೆ. ಸಂಸ್ಥೆಯು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದರು.
ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯ ನಾಲೇಜ್ ಎಕ್ಸ್‌ಪೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಎ.ಎಂ.ಖಾನ್ ಮಾತನಾಡಿ, ಮಕ್ಕಳು ತಮಗೆ ಕಠಿಣವಾದ, ಬಿಡಸಲಾದ ಎಂತಹ ಪ್ರಶ್ನೆಗಳಿದ್ದರೂ ಅವುಗಳನ್ನು ಶಿಕ್ಷಕರ ಬಳಿ ಕೇಳಬೇಕು. ಪ್ರಶ್ನೆ ಮಾಡುವುದರಿಂದ ಜ್ಞಾನ ಹೆಚ್ಚುತ್ತದೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಅದರ ಜತೆಗೆ ಆಟಕ್ಕೂ ಸಮಯ ನಿಗದಿಪಡಿಸಿಕೊಳ್ಳಬೇಕು. ಮೊಬೈಲ್ ಬಳಕೆಯಿಂದ ಮಕ್ಕಳು ದೂರ ಇರಬೇಕು. ಹೆಚ್ಚು ಮೊಬೈಲ್ ಬಳಕೆಯಿಂದ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಕ್ಕಳ ಮೇಲೆ ಪೋಷಕರ ಜವಾಬ್ದಾರಿಯೂ ಇರುತ್ತದೆ ಎಂದ ಅವರು, ಶಿಕ್ಷಣ ಸಂಸ್ಥೆಗೆ ಶುಭ ಹಾರೈಸಿದರು.
ಕಣ್ಣೂರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎ.ಉಸ್ಮಾನ್, ಕೇವಲ ಪುಸ್ತಕ ಓದುವುದು ಮಾತ್ರ ಜ್ಞಾನವಲ್ಲ. ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಯುತ್ತಾ ಜ್ಞಾನ ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ಶಾಲಾ ಕಾಲೇಜುಗಳಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಭಾರತ್ ಕನ್‌ಸ್ಟ್ರಕ್ಷನ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ಮುಸ್ತಫಾ, ದ.ಕ. ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಅಸೋಸಿಯೇಶನ್‌ನ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜಯಿಗಳಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರಶಸ್ತಿ, ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಣ್ಣೂರು ಎಜುಕೇಶನ್ ಟ್ರಸ್ಟ್ ಹಾಗೂ ಕಣ್ಣೂರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಎಚ್. ಅಬ್ದುಲ್ ಖಾದರ್, ಉಪಾಧ್ಯಕ್ಷ ಕೆ.ಬಿ.ಅಬ್ದುಲ್ ರಹ್ಮಾನ್, ಸಹ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್, ಟ್ರಸ್ಟಿಗಳಾದ ಹಮೀದ್ ಕೆ., ಎಸ್.ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಣ್ಣೂರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ರಿಯಾಝ್ ಅಹ್ಮದ್ ಕೆ.ಬಿ. ಸ್ವಾಗತಿಸಿದರು. ಶಿಕ್ಷಣ ಸಂಸ್ಥೆಯ ಜಯಲತಾ ನಿರೂಪಿಸಿದರು. ಪ್ರಾಂಶುಪಾಲೆ ವೀಣಾ ಗಂಗೊಳ್ಳಿ ವಂದಿಸಿದರು.
ಕಾರ್ಯಕ್ರಮದ ಬಳಿಕ ನಡೆದ ನಾಲೇಜ್ ಎಕ್ಸ್‌ಪೋ ಪ್ರದರ್ಶನವನ್ನು ನೂರಾರು ವಿದ್ಯಾರ್ಥಿಗಳು ವೀಕ್ಷಿಸಿದರು. ಪ್ರದರ್ಶನದಲ್ಲಿ ಜಲಮಾಲಿನ್ಯ, ಆಮ್ಲ ಮಳೆ, ಧೂಮಪಾನ ಸೇವನೆಯಿಂದ ಉಂಟಾಗುವ ಪರಿಣಾಮ, ಭೂಕಂಪದ ಎಚ್ಚರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರದರ್ಶನ ವೀಕ್ಷಿಸಲು ಬಂದಿದ್ದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
















