'ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಕಾಂಕ್ಲೇವ್ ನಲ್ಲಿ ಪಾಲ್ಗೊಳ್ಳದಿರಲು ವಿಚಾರವಾದಿ ಕಾಂಚ ಐಲಯ್ಯ ನಿರ್ಧಾರ
ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಹಲ್ಲೆ ಹಿನ್ನೆಲೆ

Photo: facebook.com/KanchaIlaiah
ಚೆನ್ನೈ: 'ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' (New Indian Express) ಈ ತಿಂಗಳ 8ರಂದು ಹಮ್ಮಿಕೊಂಡಿರುವ ವಾರ್ಷಿಕ ಶೈಕ್ಷಣಿಕ ಕಾಂಕ್ಲೇವ್ ನಲ್ಲಿ ಪಾಲ್ಗೊಳ್ಳದಿರಲು ಖ್ಯಾತ ವಿಚಾರವಾದಿ ಕಾಂಚ ಐಲಯ್ಯ ಶೆಫರ್ಡ್ ನಿರ್ಧರಿಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ನಡೆದ ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ ಈ ಚರ್ಚೆಯಿಂದ ದೂರ ಉಳಿಯುತ್ತಿರುವುದಾಗಿ ಅವರು ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
"ಥಿಂಕ್ ಎಜ್ಯು" ಎಂಟನೇ ಆವೃತ್ತಿಯ ಚಿಂತನಾಸಭೆಯಲ್ಲಿ "ದ ಐಡೆಂಟಿಟಿ ಇಶ್ಶೂ; ಹೂ ಈಸ್ ಆ್ಯನ್ ಇಂಡಿಯನ್" ಎಂಬ ವಿಷಯದ ಬಗ್ಗೆ ಮಾತನಾಡಲು ಐಲಯ್ಯ ಅವರನ್ನು ಆಹ್ವಾನಿಸಲಾಗಿತ್ತು.
"ನೀವು ಸೈದ್ಧಾಂತಿಕವಾಗಿ ಆಡಳಿತಾರೂಢ ಬಿಜೆಪಿ ಹಾಗೂ ಆರೆಸ್ಸೆಸ್ ಬೆಂಬಲಿಗರು. ನಿಮ್ಮ ಸೈದ್ಧಾಂತಿಕ ನಿಲುವು ಹೊಂದಲು ನಿಮಗೆ ಹಕ್ಕು ಇದೆ. ನಿಮ್ಮ ಸೈದ್ಧಾಂತಿಕ ಹಿನ್ನೆಲೆಯಲ್ಲಿ ತಿಳಿದುಕೊಂಡು ನಾನು ರಾಷ್ಟ್ರೀಯ ಕಳಕಳಿಯ ವಿಷಯದ ಬಗ್ಗೆ ಚರ್ಚೆಯಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸುತ್ತಾ ಬಂದಿದ್ದೇನೆ. ಇದು ವಿಭಿನ್ನ ಸಿದ್ಧಾಂತದವರಿಗೆ ಪರಸ್ಪರ ಪ್ರಭಾವ ಬೀರಲು ಕಾರಣವಾಗುತ್ತದೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯ ಬಲಗೊಳಿಸಲು ನೆರವಾಗುತ್ತದೆ ಎನ್ನುವುದು ನನ್ನ ಅಭಿಮತ. ಇದು ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸಲು ನೆರವಾಗುತ್ತದೆ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ನೂರಾರು ಚಿಂತನೆಗಳು ಬೆಳೆಯುತ್ತವೆ ಎಂಬ ಕಾರಣಕ್ಕೆ ಭಾಗವಹಿಸುತ್ತಿದ್ದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಆದರೆ ಹಲವು ವರ್ಷಗಳಿಂದ ನಾವು ಚರ್ಚೆ ಮಾಡುತ್ತಲೇ ಇದ್ದೇವೆ. ಆಡಳಿತಾರೂಢ ಬಿಜೆಪಿ/ಆರೆಸ್ಸೆಸ್ನ ಹಲವು ಮುಖಂಡರೂ ಇದರಲ್ಲಿ ಭಾಗವಹಿಸುತ್ತಾ ಬಂದಿದ್ದಾರೆಯೇ ವಿನಃ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವ ಬದಲು ಕಳಪೆಯಾಗುತ್ತಲೇ ಬಂದಿದೆ. ಸೈದ್ಧಾಂತಿಕ ಚರ್ಚೆ ನಡೆಸುವ ಬದಲು, ಯುವ ಮನಸ್ಸುಗಳು ಕ್ರೂರವಾಗಿ ದೈಹಿಕ ಹಿಂಸೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ" ಎಂದು ವಿವರಿಸಿದ್ದಾರೆ.
ಜಾಮಿಯ ಮಿಲ್ಲಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸಿಎಎ ಪ್ರತಿಭಟನೆ ವೇಳೆ ನಡೆದ ದೌರ್ಜನ್ಯಗಳು ಕ್ಯಾಂಪಸ್ ಆಡಳಿತದ ಬಗೆಗೆ ಆತಂಕಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಹೇಳಿ ಜನವರಿ 5ರಂದು ಜೆಎನ್ಯು ಕ್ಯಾಂಪಸ್ನಲ್ಲಿ ನಡೆದ ಹಲ್ಲೆಯನ್ನು ಉಲ್ಲೇಖಿಸಿದ್ದಾರೆ. ಈ ಕಾರಣದಿಂದ ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ. ಈ ಸಲದಿಂದಾರೂ ಚರ್ಚೆಗೆ ಧನಾತ್ಮಕ ಇಚ್ಛಾಶಕ್ತಿ ಹಾಗೂ ಧನಾತ್ಮಕ ಬೌದ್ಧಿಕ ವಾತಾವರಣ ಸಿಗಲಿ ಎಂದು ಪತ್ರದಲ್ಲಿ ಆಶಿಸಿದ್ದಾರೆ.







