ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಗೆ ಪತ್ರಿಕಾಗೋಷ್ಠಿಗೆ ನಿರಾಕರಣೆ !
► ಮಂಗಳೂರು ಹಿಂಸಾಚಾರ- ಪೊಲೀಸ್ ಗೋಲಿಬಾರ್ ಪ್ರಕರಣ ► ಹೊಟೇಲ್ ಆವರಣದಲ್ಲೇ ಮಾಹಿತಿ ನೀಡಿದ ತಂಡ

ಮಂಗಳೂರು, ಜ.7: ನಗರದಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸ್ ಗೋಲಿಬಾರ್‌ಗೆ ಸಂಬಂಧಿಸಿ ಸತ್ಯಾಂಶದ ಕುರಿತು ವರದಿ ಮಾಡಲು ಬಂದಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ನೇತೃತ್ವದ ತಂಡಕ್ಕೆ ಪೊಲೀಸರು ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನಿರಾಕರಿಸಿದ ಘಟನೆ ನಡೆದಿದೆ.
‘‘ಡಿ.19ರಂದು ನಡೆದ ಘಟನೆಗೆ ಸಂಬಂಧಿಸಿ ಕಳೆದ ಎರಡು ದಿನಗಳಿಂದ ಸತ್ಯ ಶೋಧನೆಯನ್ನು ನಡೆಸುತ್ತಿರುವ ನಮ್ಮ ತಂಡ ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪ್ರಾಥಮಿಕ ವರದಿಯನ್ನು ನೀಡಲು ಮುಂದಾಗಿತ್ತು. ಆದರೆ ಸುಮಾರು ಎಂಟರಿಂದ 10 ಹೊಟೇಲ್‌ಗಳಲ್ಲಿ ಪತ್ರಿಕಾಗೋಷ್ಠಿಗೆ ಅವಕಾಶವನ್ನು ಹೊಟೇಲ್ ಮುಖ್ಯಸ್ಥರ ಮೂಲಕ ಒತ್ತಡ ಹೇರಿ ನಿರಾಕರಿಸಲಾಗಿದೆ. ಪತ್ರಿಕಾಗೋಷ್ಠಿ ನಡೆಸಬೇಕಿದ್ದರೆ ಪೊಲೀಸರಿಂದ ಅನುಮತಿ ಪತ್ರ ಬೇಕು ಎಂಬ ಹೇಳಿಕೆಯನ್ನು ಹೊಟೇಲ್ ಸಿಬ್ಬಂದಿ ತಿಳಿಸಿದ್ದಾರೆ’’ ಎಂದು ಜನತಾ ನ್ಯಾಯಾಲಯ ತಂಡದ ಸದಸ್ಯರಲ್ಲಿ ಓರ್ವರಾದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ನಗರದ ಹೊಟೇಲೊಂದರ ಆವರಣದಲ್ಲಿ ಮಾಹಿತಿ ನೀಡಿದರು.
‘‘ನಾವು ಯಾರ ಹಕ್ಕನ್ನು ಮುರಿಯಲು ಅಥವಾ ನಿಯಮವನ್ನು ಮೀರಲು ಬಂದಿಲ್ಲ. ಆದರೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರಿಗೆ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ಸಿಗದಿರುವುದು ಮಾತ್ರ ದುರದೃಷ್ಟಕರ’’ ಎಂದು ಸುಗತ ಬೇಸರಿಸಿದರು.
ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಗೆ ಪತ್ರಿಕಾಗೋಷ್ಠಿ ನಡೆಸಲು ಸ್ವಾತಂತ್ರ ಇಲ್ಲ ಎಂದಾದರೆ, ಇಂತಹ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ಪಾಡೇನು ಎನ್ನುವಂತಾಗಿದೆ. ನಿನ್ನೆಯಿಂದ ಜನತಾ ನ್ಯಾಯಾಲಯ ನಡೆಸದಂತೆಯೂ ಹೊಟೇಲ್ ಆಡಳಿತದ ಮೂಲಕ ಒತ್ತಡ ತರಲಾಗಿತ್ತು. ಹಾಗಿದ್ದರೂ ನಮ್ಮ ತಂಡ ಸಾಕಷ್ಟು ಅಹವಾಲುಗಳನ್ನು ಸ್ವೀಕರಿಸಿ, ಮಾಹಿತಿಗಳನ್ನು ರೆಕಾರ್ಡ್ ಮಾಡಿಕೊಂಡಿದೆ. ಸಣ್ಣಪುಟ್ಟ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಮೆಡಿಕೋ -ಲೀಗಲ್ ಸೇರಿದಂತೆ ಫಾರೆನ್ಸಿಕ್ ವರದಿಯನ್ನೂ ಪಡೆಯಲಾಗಿದೆ. ನಮ್ಮದು ಸ್ವತಂತ್ರ ತನಿಖೆ. ನಾವು ಪರಿಸ್ಥಿತಿಯ ಕುರಿತಂತೆ ನಾವೇನು ತೀರ್ಪು ನೀಡುವವರಲ್ಲ. ಜನಪರವಾಗಿ ನಾವು ಏನು ಮಾಡಲು ಸಾಧ್ಯವೋ ಅದನ್ನಷ್ಟೇ ಮಾಡುತ್ತಿದ್ದೇವೆ’’ ಎಂದು ಸುಗತ ಶ್ರೀನಿವಾಸರಾಜು ತಿಳಿಸಿದರು.
ಲಿಸನಿಂಗ್ ಪೋಸ್ಟ್‌ನ ಅಶೋಕ್ ಮರಿದಾಸ್ ಉಪಸ್ಥಿತರಿದ್ದರು.
ಸತ್ಯಾಂಶವನ್ನು ತಿಳಿಯುವುದಷ್ಟೇ ನಮ್ಮ ಉದ್ದೇಶ
‘‘ಕಳೆದ ಎರಡು ದಿನಗಳಲ್ಲಿ ನಾವು ಹಲವಾರು ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ್ದೇವೆ. ಇಂದು ಆಸ್ಪತ್ರೆಗಳಲ್ಲಿ ಗಾಯಾಳು ಗಳನ್ನು ಭೇಟಿ ಮಾಡಿದ್ದೇವೆ. ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಜತೆ ಮಾತನಾಡಿ, ಘಟನಾ ಸ್ಥಳವನ್ನೂ ಪರಿಶೀಲಿಸಿದ್ದೇವೆ. ನಮ್ಮ ತಂಡ ಜನಪರ ಸಂಘಟನೆಯ ಮನವಿಯ ಮೇರೆಗೆ ಇಲ್ಲಿ ಸತ್ಯಾಂಶವನ್ನು ಕಂಡುಕೊಳ್ಳಲು ಮಾತ್ರವೇ ಬಂದಿದ್ದೇವೆ. ನಮ್ಮ ವರದಿ ಯಾವುದೇ ತೀರ್ಪು ಆಗಿರುವುದಿಲ್ಲ. ನಮಗೆ ಇಲ್ಲಿನ ಹೊಟೇಲ್‌ನವರು, ಜನತೆ, ಸ್ಥಳೀಯರು ಎಲ್ಲರೂ ಸಹಕಾರ ನೀಡಿದ್ದಾರೆ. ಎಲ್ಲಾ ದಾಖಲೆ, ಸಾಕ್ಷಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಶೀಘ್ರವೇ ಅಂತಿಮ ವರದಿಯನ್ನು ಪ್ರಕಟಿಸಲಿದ್ದೇವೆ’’
- ಬಿ.ಟಿ.ವೆಂಕೇಶ್, ಹಿರಿಯ ನ್ಯಾಯವಾದಿ.
ಗಾಬರಿಯಿಂದ ಅವಕಾಶ ನಿರಾಕರಿಸಿದಂತಿದೆ
‘‘ನಿವೃತ್ತ ನ್ಯಾಯಾಧೀಶರು ನಿನ್ನೆ ಮರದಡಿಯಲ್ಲಿ ಕುಳಿತು ಅಹವಾಲು ಆಲಿಸಲು ಸಿದ್ಧವಾಗಿರುವುದಾಗಿ ಹೇಳಿದ್ದರು. ಆದರೆ ಯಾವ ಕಾರಣಕ್ಕಾಗಿ ಅವರಿಗೆ ಈ ರೀತಿ ಅವಕಾಶ ನಿರಾಕರಣೆ ಮಾಡಿದ್ದಾರೆಂಬುದು ಪೊಲೀಸರಿಗೆ ಬಿಟ್ಟ ವಿಷಯ. ಬಹುಶ: ಅವರಿಗೆ ಗಾಬರಿ ಆದಂತಿದೆ. ಯಾರಿಗೂ ತೊಂದರೆ ನೀಡುವ, ನಿಯಮ, ಮೀರುವ ಉದ್ದೇಶ ನಮ್ಮದಲ್ಲ. ಈ ಬಗ್ಗೆ ನಮ್ಮದೇನು ತಕರಾರು ಇಲ್ಲ. ನಾಡಿನ ಅತ್ಯುನ್ನತ ಹುದ್ದೆಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ಯನ್ನು ಬೀದಿಯಲ್ಲಿ ನಿಲ್ಲಿಸಿ ಮಾತನಾಡಿಸಲು ನಮ್ಮ ಮನಸಾಕ್ಷಿ ಕೂಡಾ ಒಪ್ಪಲಿಲ್ಲ.’’
- ಸುಗತ ಶ್ರೀನಿವಾಸರಾಜು, ಹಿರಿಯ ಪತ್ರಕರ್ತ







