ಒಂದು ಜೆಎನ್‌ಯು ಹತ್ತಿಕ್ಕಿದರೆ, ಹತ್ತಾರು ಜೆಎನ್‌ಯು ಸಿಡಿದೇಳುತ್ತವೆ: ಸಸಿಕಾಂತ್ ಸೆಂಥಿಲ್

ಕಲಬುರ್ಗಿ, ಜ.7: ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಹತ್ತಿಕ್ಕಲು ಹೊರಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದಾದ್ಯಂತ ವಿದ್ಯಾರ್ಥಿಗಳು ಸಿಡಿದೇಳಲಿದ್ದಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ತನ್ನ ಮೊಂಡುತನ ಬಿಟ್ಟು ಜನಗಳ, ವಿದ್ಯಾರ್ಥಿಗಳ ಮಾತನ್ನು ಆಲಿಸಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ವಿದ್ಯಾರ್ಥಿಗಳು, ಸಾಮಾನ್ಯ ಜನರೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ ಎಂದರು.
ದೇಶದ ಜನರ ಆಕ್ರೋಶಭರಿತ ಹೋರಾಟದಿಂದ ಹತಾಶವಾದ ಕೇಂದ್ರ ಸರಕಾರ ಬುಲೆಟ್ ಮೂಲಕ ತಡೆಯಲು ಹೊರಟಿದೆ. ಇದು ಅಪಾಯಕಾರಿ. ಎಲ್ಲರೂ ಇದರ ವಿರುದ್ಧ ಹೋರಾಟ ನಡೆಸಬೇಕಿದೆ. ನೀವು ಒಂದು ವಿವಿಯನ್ನು ಹತ್ತಿಕ್ಕಲು ಮುಂದಾದರೆ, ಹತ್ತಾರು ವಿವಿಗಳು ನಿಮ್ಮ ವಿರುದ್ಧ ನಿಲ್ಲಲಿವೆ ಎಂದು ಎಚ್ಚರಿಕೆ ನೀಡಿದರು.
ಎನ್‌ಆರ್‌ಸಿ, ಎನ್‌ಪಿಆರ್ ಎರಡೂ ಒಂದೇ: ಜನರನ್ನು ದಿಕ್ಕು ತಪ್ಪಿಸಲು ಕೇಂದ್ರ ಸರಕಾರ ಎನ್‌ಆರ್‌ಸಿ ಜಾರಿ ಮಾಡಲ್ಲ, ಎನ್‌ಪಿಆರ್ ಮಾಡುತ್ತೇವೆ ಎಂದಿದೆ. ಇದನ್ನು ಗೃಹ ಇಲಾಖೆ ಮೇಲ್ವಿಚಾರಣೆಯಲ್ಲಿ ನಡೆಸುತ್ತಿದೆ. ಸಿಎಎಯಿಂದ ಯಾರ ಪೌರತ್ವವನ್ನು ಕಸಿಯುವ ಉದ್ದೇಶವಿಲ್ಲ ಎಂಬುದು ಹಸಿ ಸುಳ್ಳು. ಇದರಿಂದ ಮುಸ್ಲಿಮರಷ್ಟೇ ಅಲ್ಲ ಎಲ್ಲರೂ ಪೌರತ್ವವನ್ನು ಸಾಬೀತುಪಡಿಸಬೇಕಾಗುತ್ತದೆ ಎಂದರು.
ನಿರುದ್ಯೋಗ, ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳು ದೇಶವನ್ನು ಕಾಡುತ್ತಿರುವಾಗ ಈ ಪ್ರಕ್ರಿಯೆ ಅನಿವಾರ್ಯವಿದೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ ಮುಂದಿನ ದಿನಗಳಲ್ಲಿ ರಾಜಕೀಯ ಸೇರುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.







