ಚಿಕ್ಕಮಗಳೂರು: ಮಹಿಳಾ ಕಾಂಗ್ರೆಸ್‍ನಿಂದ ಜಿಪಂ ಕಚೇರಿ ಎದುರು ಬೋಂಡ ತಯಾರಿಸಿ ಪ್ರತಿಭಟನೆ
ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗೆ ಕೇಂದ್ರ ಸರಕಾರ ವಿಫಲ- ಆರೋಪ

ಚಿಕ್ಕಮಗಳೂರು, ಜ.7: ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಹಾಗೂ ಸೂಕ್ತ ಅತಿವೃಷ್ಟಿ ಪರಿಹಾರ ಬಿಡುಗಡೆಗೆ ಕೇಂದ್ರದ ಬಿಜೆಪಿ ಸರಕಾರ ನಿರ್ಲಕ್ಷ್ಯ ವಹಿಸಿದೆ. ಈ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಸಂಸದೆ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಮುಖಂಡರು ಮಂಗಳವಾರ ಜಿಲ್ಲಾ ಪಂಚಾಯತ್ ಕಚೇರಿ ಎದುರು ಈರುಳ್ಳಿ ಬೋಂಡಾ ತಯಾರಿಸಿ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈರುಳ್ಳಿ ಹಾರ ಹಾಕಿ ಧರಣಿ ನಡೆಸಿದರು.
ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಯಶೋಧಮ್ಮ, ವನಮಾಲ ದೇವರಾಜ್, ಸುರೇಖಾ ಸಂಪತ್, ರೇಣುಕಾ, ರೇವತಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮತ್ತಿತರ ಮುಖಂಡರು ಮತ್ತು ನೂರಾರು ಮಹಿಳಾ ಕಾರ್ಯಕರ್ತೆಯ ರೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿ ಎದುರು ಕಟ್ಟಿಗೆಯಿಂದ ಬೆಂಕಿ ಉರಿಸಿ ಬೋಂಡಾ ತಯಾರಿಸಿ, ಕೈಗಳಲ್ಲಿ ಈರುಳ್ಳಿ ಹಾರ ಹಿಡಿದು, ಕೇಂದ್ರದ ಬಿಜೆಪಿ ಸರಕಾರ, ರಾಜ್ಯ ಸರಕಾರ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೇಂದ್ರ ಸರಕಾರ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸು ವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕೇಂದ್ರ ಸರಕಾರ ಕೇವಲ ಕೋಮುಭಾವನೆ ಕೆರಳಿಸುವ, ಹಿಂದೂ ರಾಷ್ಟ್ರ ನಿರ್ಮಾಣ ಮಾಡುವಂತಹ ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದೆ. ಕೇಂದ್ರ ಆರ್ಥಿಕ ನೀತಿಗಳಿಂದಾಗಿ ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ. ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ನಿರುದ್ಯೋಗ, ಬಡತನ, ಹಸಿವಿನ ಸೂಚ್ಯಂಕಗಳು ಏರುತ್ತಿವೆ, ದೇಶದ ಆರ್ಥಿಕ ಸ್ಥಿತಿಗೆ ಕೈಗನ್ನಡಿಯಾದ ಜಿಡಿಪಿ ದರ ಗಣನೀಯವಾಗಿ ಇಳಿಮುಖವಾಗಿದೆ ಎಂದ ಅವರು, ಗ್ರಾಮೀಣ ಜನರಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿ ಹೇಳಿ ಅಡುಗೆ ಅನಿಲ ದರವನ್ನು 1 ಸಾವಿರಕ್ಕೆ ಏರಿಸುವ ಮೂಲಕ ಬಡ ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡಲೂ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಸಂಸತ್‍ನಲ್ಲಿ ಧ್ವನಿ ಎತ್ತಬೇಕಾದ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಸತ್‍ನಲ್ಲಿ ಚಕಾರ ಎತ್ತದೇ ತಮ್ಮನ್ನು ಆರಿಸಿದ ಮತದಾರ ರಿಗೆ ದ್ರೋಗ ಬಗೆಯುತ್ತಿದ್ದಾರೆಂದು ಆರೋಪಿಸಿದರು.
ಮಹಿಳಾ ಘಟಕದ ನಾಯಕಿ ವನಮಾಲ ದೇವರಾಜ್ ಮಾತನಾಡಿದರು. ಧರಣಿ ವೇಳೆ ಜಿಲ್ಲಾ ಪಂಚಾಯತ್ ಕಚೇರಿಗೆ ದಿಶಾ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಹಿಳಾ ಕಾಂಗ್ರೆಸ್ ಮುಖಂಡರು ಮನವಿ ನೀಡಲು ಮುಂದಾದಾಗ ಕೆಲ ಮಹಿಳೆಯರು ಈರುಳ್ಳಿಯಿಂದ ಮಾಡಲಾಗಿದ್ದ ಹಾರವೊಂದನ್ನು ಸಂಸದೆಯ ಕುತ್ತಿಗೆಗೆ ಹಾಕಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಸಂಸದೆ ಶೋಭಾ ಮನವಿ ಸ್ವೀಕರಿಸದೇ ಕಾರಿನಲ್ಲೇ ಕುಳಿತು ಜಿಪಂ ಕಚೇರಿ ಗೇಟ್ ಒಳಗೆ ಪ್ರವೇಶಿಸಿದರು. ಪೊಲೀಸರು ಧರಣಿ ನಿರತರನ್ನು ತಡೆದು ಹೊರ ಕಳುಹಿಸಿದರು.
ಇದಕ್ಕೂ ಮುನ್ನ ಧರಣಿ ನಿರತರು ಜಿಪಂ ಕಚೇರಿ ಆವರಣದ ಗೇಟ್‍ನ ಮುಂಭಾಗದಲ್ಲಿ ಉರುವಲು ಬಳಸಿ ಬೋಂಡ ತಯಾರಿಸಿ ಸ್ಥಳದಲ್ಲಿದ್ದರಿಗೆ ಹಂಚಿ, ಗ್ಯಾಸ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಧರಣಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಮುಖಂಡ ಎಂ.ಎಲ್.ಮೂರ್ತಿ, ಬಿ.ಎಂ.ಸಂದೀಪ್, ಪವನ್ ಮತ್ತಿತರರು ಭಾಗವಹಿಸಿದ್ದರು.







.jpeg)





