ಶಿವಮೊಗ್ಗ ಉಪ ವಿಭಾಗಾಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು
ಉಪ ಪ್ರಾಂಶುಪಾಲೆ ವಿರುದ್ದ ಎಫ್‍ಐಆರ್ !
ಶಿವಮೊಗ್ಗ, ಜ. 7: ಶಿವಮೊಗ್ಗ ಉಪ ವಿಭಾಗಾಧಿಕಾರಿ (ಎ.ಸಿ.) ಟಿ.ವಿ.ಪ್ರಕಾಶ್‍ರವರ ಪತ್ನಿ ಸುಮಾ (45) ರವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ದೊರಕಿದೆ. ಅವರ ಪತ್ನಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲೆಯ, ಉಪ ಪ್ರಾಂಶುಪಾಲೆ ವಿರುದ್ದ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಉಪ ಪ್ರಾಂಶುಪಾಲೆಯ ಕಿರುಕುಳದಿಂದ ಬೇಸತ್ತು, ಪತ್ನಿ ಸುಮಾರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟಿ.ವಿ.ಪ್ರಕಾಶ್‍ರವರು ಮತ್ತೊಂದು ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ತುಂಗಾ ನಗರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ: ಸುಮಾರವರು ಭದ್ರಾವತಿಯ ಸಂಚಿ ಹೊನ್ನಮ್ಮ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಎರಡು ತಿಂಗಳ ಹಿಂದಷ್ಟೆ ಅವರು ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್‍ನ ಪ್ರೌಢ ಶಾಲಾ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು.
ಆದರೆ ಕಳೆದ ಡಿಸೆಂಬರ್ 24 ರಂದು ನಿಸರ್ಗ ಲೇಔಟ್‍ನಲ್ಲಿದ್ದ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿರಲಿಲ್ಲ. ಆದರೆ ಮಕ್ಕಳಾಗದ ಕಾರಣದಿಂದ ಜೀವನದಲ್ಲಿ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪತಿಯೂ ಪೊಲೀಸರಿಗೆ ದೂರು ನೀಡಿದ್ದರು.
ತಿರುವು: ಇತ್ತೀಚೆಗೆ ಸುಮಾರವರು ಬಳಸುತ್ತಿದ್ದ ಮೊಬೈಲ್ ಫೋನ್ ಪರಿಶೀಲನೆಯಿಂದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರಕಿತ್ತು. ಆತ್ಮಹತ್ಯೆಗೂ ಮುನ್ನ ಸಹೋದ್ಯೋಗಿಯೋರ್ವರ ಮೊಬೈಲ್‍ಗೆ ಕರೆ ಮಾಡಿ ಮಾತನಾಡಿದ್ದರು. ಉಪ ಪ್ರಾಂಶುಪಾಲೆಯಿಂದ ಉಂಟಾಗುತ್ತಿದ್ದ ಕಿರಿಕಿರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ವಿವರ ಬೆಳಕಿಗೆ ಬಂದಿತ್ತು.
ಹಾಗೆಯೇ ಪತಿ ಪ್ರಕಾಶ್‍ರವರ ಬಳಿಯೂ ಉಪ ಪ್ರಾಂಶುಪಾಲೆಯಿಂದ ಆಗುತ್ತಿದ್ದ ಕಿರಿಕಿರಿಯ ಬಗ್ಗೆ ಸುಮಾರವರು ಹೇಳಿಕೊಂಡಿದ್ದರು ಎನ್ನಲಾಗಿದೆ. ಈ ಕಾರಣದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ, ಉಪ ಪ್ರಾಂಶುಪಾಲೆ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.







