ಚಿಕ್ಕಮಗಳೂರು : ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯೆಗೆ ಸಂಸದೆ ಶೋಭಾ ಹಲ್ಲೆ ; ಆರೋಪ

ಚಿಕ್ಕಮಗಳೂರು, ಜ.7: ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಮಹಿಳಾ ಕಾಂಗ್ರೆಸ್‍ನ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಪಕ್ಷದ ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಜಿಲ್ಲಾ ಪಂಚಾಯತ್ ಕಚೇರಿ ಎದುರು ಮಂಗಳವಾರ ಬೆಳಗ್ಗೆ ಮಹಿಳಾ ಕಾಂಗ್ರೆಸ್‍ನ ಸದಸ್ಯರು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಎಂ.ಎಲ್.ಮೂರ್ತಿ, ಬಿ.ಎಂ.ಸಂದೀಪ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಈರುಳ್ಳಿ ಬೋಂಡ ತಯಾರಿಸಿ, ಈರುಳ್ಳಿ ಹಾರಗಳನ್ನು ಕೊರಳಿಗೆ ಹಾಕಿಕೊಂಡು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು. ಧರಣಿ ನಡೆಯುತ್ತಿದ್ದ ವೇಳೆ ದಿಶಾ ಕಾರ್ಯಕ್ರಮದ ನಿಮಿತ್ತ ಜಿಪಂ ಕಚೇರಿಗೆ ಸಂಸದೆ ಶೋಭಾ ಕರಂದ್ಲಾಜೆ ಕಾರಿನಲ್ಲಿ ಆಗಮಿಸಿ ಕಚೇರಿಯ ಗೇಟ್ ಮುಂಭಾಗದಲ್ಲಿ ಕಾರು ನಿಲ್ಲಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಕಾರು ನಿಲ್ಲಿಸುತ್ತಿದ್ದಂತೆ ಮಹಿಳೆಯರು, ಮುಖಂಡರು, ಕಾರ್ಯಕರ್ತರು ಕೇಂದ್ರ ಸರಕಾರ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದೆ ವಿರುದ್ಧ ಧಿಕ್ಕಾರ ಕೂಗಿ, ನಂತರ ಸಂಸದೆ ಶೋಭಾ ಅವರ ಕಾರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಮಹಿಳಾ ಮುಖಂಡರು ಸಂಸದೆಗೆ ಬೆಲೆ ಏರಿಕೆ ನಿಯಂತ್ರಣಕ್ಕೆ ಒತ್ತಾಯಿಸಿ ಮನವಿ ಪತ್ರವೊಂದನ್ನು ನೀಡಲು ಮುಂದಾಗಿದ್ದು, ಮಹಿಳಾ ಕಾಂಗ್ರೆಸ್‍ನ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ನಗೀನಾ ಎಂಬವರು ತಮ್ಮ ಕೊರಳಿನಲ್ಲಿದ್ದ ಈರುಳ್ಳಿ ಹಾರವನ್ನು ಸಂಸದೆ ಶೋಭಾ ಕರಂದ್ಲಾಜೆ ಕೊರಳಿಗೆ ಹಾಕಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ಶೋಭಾ ಅವರು, ಈರುಳ್ಳಿ ಹಾರದೊಂದಿಗೆ ನಗೀನಾ ಅವರ ಮುಖದತ್ತ ಕೈಬೀಸಿದರು. ಈ ವೇಳೆ ಶೋಭಾ ಕರಂದ್ಲಾಜೆ ಅವರ ಕೈ ನಗೀನಾ ಅವರ ತುಟಿಗೆ ತಾಗಿ ತುಟಿಯಿಂದ ರಕ್ತ ಸುರಿದ ಘಟನೆ ನಡೆಯಿತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅಡ್ಡಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕೂಡಲೇ ಸಂಸದೆ ಶೋಭಾ ಕಾರು ನಿಲ್ಲಿಸದೇ, ಪ್ರತಿಭಟನಾಕಾರರ ಮನವಿಯನ್ನೂ ಸ್ವೀಕರಿಸಿದೇ ಜಿಪಂ ಕಚೇರಿ ಒಳಗೆ ನಡೆದರು.
ಈ ಘಟನೆ ಬಳಿಕ ಆಕ್ರೋಶಗೊಂಡ ಮಹಿಳಾ ಕಾಂಗ್ರೆಸ್ ಘಟಕದ ಮುಖಂಡರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಎಐಸಿಸಿ ಸದಸ್ಯ ಸಂದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮತ್ತಿತರರು ಸಂಸದರನ್ನು ಹಿಂಬಾಲಿಸಿ ಮನವಿಯನ್ನಾದರೂ ಸ್ವೀಕರಿಸಬೇಕೆಂದು ಪಟ್ಟು ಹಿಡಿದು ಜಿಪಂ ಕಚೇರಿ ಒಳಗೆ ಹೋಗಲು ಯತ್ನಿಸಿದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಹಿಂದಕ್ಕೆ ತಳ್ಳಲಾರಂಭಿಸಿದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಎಲ್ಲರನ್ನೂ ಕಚೇರಿ ಆವರಣದಿಂದ ಹೊರಗೆ ಕರೆತಂದರು.
ನಂತರ ಮುಖಂಡರು ಮಾತನಾಡಿ, ಶೋಭಾ ಕರಂದ್ಲಾಜೆ ನಮ್ಮ ಕ್ಷೇತ್ರದ ಸಂಸದೆ, ನಾವು ಅವರನ್ನು ಆಯ್ಕೆ ಮಾಡಿ ಸಂಸತ್‍ಗೆ ಕಳುಹಿಸಿದ್ದೇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಅತಂತ್ರವಾಗಿದೆ. ಈ ಸಂಬಂಧ ಅವರು ಸಂಸತ್‍ನಲ್ಲಿ ಪ್ರಸ್ತಾಪ ಮಾಡುತ್ತಿಲ್ಲ. ಅವರು ನಮ್ಮ ಜನಪ್ರತಿನಿಧಿಯಾಗಿದ್ದರಿಂದ ಪ್ರತಿಭಟನೆ ಮಾಡಿದ್ದೇವೆ. ಆದರೆ ಅವರು ಮನವಿ ಸ್ವೀಕರಿಸದೇ ಪಕ್ಷದ ಸದಸ್ಯೆಯೊಬ್ಬರಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಾಯವಾಗಿ ರಕ್ತ ಸುರಿದಿದೆ. ಶೋಭಾ ಅವರಿಂದ ಈ ವರ್ತನೆ ನಿರೀಕ್ಷಿಸಿರಲಿಲ್ಲ. ಸಂಸದೆ ಶೋಭಾ ಗೂಂಡಾಗಿರಿ ಮಾಡಿದ್ದಾರೆ. ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
''ನಾನು ಜಿಪಂ ಕಚೇರಿಗೆ ಕಾರಿನಲ್ಲಿ ಬಂದಿದ್ದು, ಕಾಂಗ್ರೆಸ್‍ನವರ ಪ್ರತಿಭಟನೆ ವೇಳೆ ನಾನು ಕಾರಿನಲ್ಲೇ ಇದ್ದೆ. ಅವರು ಕಾರನ್ನು ತಡೆಯಲು ಬಂದಾಗ ನಾನು ಕಾರು ನಿಲ್ಲಿಸಿಲ್ಲ. ಕಾರಿನಿಂದ ಇಳಿದಿಲ್ಲ ಎಂದ ಮೇಲೆ ಇನ್ನೂ ಹಲ್ಲೆ ಮಾಡುವುದು ಹೇಗೆ, ಕಾಂಗ್ರೆಸ್‍ನವರಿಗೆ ಬೇರೆ ಕೆಲಸವಿಲ್ಲ. ಆದ್ದರಿಂದ ಅವರು ಈಗ ಉದ್ಯೋಗ ಇಲ್ಲದೇ ಪಕೋಡ ಮಾರುತ್ತಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್‍ನವರು ಸದಾ ಕಾಲ ಪಕೋಡ ಮಾರುತ್ತಿರಲಿ ಎಂದು ನಾನು ದೇವರನ್ನು ಬೇಡಿಕೊಳ್ಳುತ್ತೇನೆ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ'' ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
.jpg)







