ಜ.19: ಉಡುಪಿ ಧರ್ಮಪ್ರಾಂತ ಮಟ್ಟದ ‘ಸಮುದಾಯೋತ್ಸವ-2020’
ಉಡುಪಿ, ಜ.7: ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಧರ್ಮ ಪ್ರಾಂತ್ಯ ಮಟ್ಟದ ಸಮ್ಮೇಳನ ಸಮುದಾಯೋತ್ಸವ-2020ನ್ನು ಜ.19ರಂದು ಬೆಳಗ್ಗೆ 10ಗಂಟೆಗೆ ಕಲ್ಯಾಣಪುರದ ಮೌಂಟ್ ರೋಜರಿ ಚರ್ಚ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೆಥೊಲಿಕ್ ಸಮುದಾಯವನ್ನು ಮತ್ತಷ್ಟು ಸಶಕ್ತರನ್ನಾಗಿಸಬೇಕು ಹಾಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸದೃಢಗೊಳಿಸಬೇಕು ಎಂಬ ಉದ್ದೇಶದೊಂದಿಗೆ ಏಕತೆ ಮತ್ತು ಸಮುದಾಯದ ಭವಿಷ್ಯದ ಕುರಿತು ಚಿಂತನ ಮತ್ತು ಮಂಥನ ಮಾಡುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಸಮ್ಮೇಳದಲ್ಲಿ ಉತ್ತರಾಖಂಡದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಉಡುಪಿ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಬೆಂಗಳೂರು ಮಹಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಮಚಾದೊ, ಮಂಗಳೂರಿನ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ, ಮಾಜಿ ಶಾಸಕ ಜೆ.ಆರ್.ಲೋಬೊ, ನಿವೃತ ಕೆ.ಎ.ಎಸ್. ಅಧಿಕಾರಿ ಅ್ಯಂಟನಿ ಮೆಂಡೊನ್ಸಾ, ಹಿರಿಯ ಪತ್ರಕರ್ತ ಗೇಬ್ರಿಯಲ್ ವಾಜ್, ಮಹಾ ರಾಷ್ಟ್ರದ ಹಿರಿಯ ರಾಜಕೀಯ ನಾಯಕಿ ಜಾನೆಟ್ ಡಿಸೋಜ ಸೇರಿದಂತೆ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿರುವರು.
ಕೆಥೊಲಿಕ್ ಸಮುದಾಯದಲ್ಲಿ ಕೃಷಿ, ಆರೋಗ್ಯ, ರಾಜಕೀಯ, ಸಮಾಜಸೇವೆ ಮತ್ತು ಸಮೂಹ ಮಾಧ್ಯಮದಲ್ಲಿ ಸಾಧನೆ ಮಾಡಿದ ಹಾಗೂ ಉಡುಪಿ ಮೂಲದವರಾಗಿದ್ದು, ಕಳೆದ 2 ವರ್ಷಗಳಿಂದ ಹೊರ ದೇಶ, ರಾಜ್ಯಗಳಲ್ಲಿ ಸಾಧನೆ ಮಾಡಿದವರಿಗೆ, ಸಹಕಾರಿ ಸಂಘ ಹಾಗೂ ಎಪಿಎಂಸಿಗಳಲ್ಲಿ ನಿರ್ದೇಶಕ ರಾಗಿದ್ದವರಿಗೆ, ಗಜೆಟೆಡ್ ಮತ್ತು ಅದಕ್ಕಿಂತ ಉನ್ನತ ಹಂತದ ಅಧಿಕಾರಿಗಳಿಗೆ ಹಾಗೂ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಕ್ರೈಸ್ತ ನಾಯಕರಿಗೆ ಸನ್ಮಾನಿಸ ಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಸಮು ದಾಯೋತ್ಸವದ ಸಂಚಾಲಕ ಎಲರೊಯ್ ಕಿರಣ್ ಕ್ರಾಸ್ತಾ, ಕಾರ್ಯದರ್ಶಿ ಮೇರಿ ಡಿಸೋಜ ಉಪಸ್ಥಿತರಿದ್ದರು.







