ಬಜಾಲ್ ನಂತೂರು: ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಕೂಟ

ಮಂಗಳೂರು, ಜ.7: ಬಜಾಲ್ ನಂತೂರಿನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಕೂಟವು ಇತ್ತೀಚೆಗೆ ಜರುಗಿತು. ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ದುಆಗೈದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಕ್ರೀಡಾಪಟುಗಳು ಪ್ರೇರಣೆಯಾಗಬೇಕು ಎಂದರು.
ಶಾಲಾಧ್ಯಕ್ಷ ಅಬ್ದುಲ್ ರವೂಫ್, ನಿಕಟಪೂರ್ವ ಅಧ್ಯಕ್ಷ ಹಾಜಿ ಡಾ. ಡಿಕೆ ಅಬ್ದುಲ್ ಹಮೀದ್ ಮತ್ತು ರಫೀಕ್ ಮಾಸ್ಟರ್ ಶುಭ ಹಾರೈಸಿದರು. ಕಾರ್ಪೊರೇಟರ್ ಅಶ್ರಫ್ ಬಜಾಲ್, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ಮಕ್ಕಳ ಹೆತ್ತವರು ಮತ್ತು ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಪೊರೇಟರ್ ಅಬ್ದುಲ್ ರವೂಫ್ ವಹಿಸಿದ್ದರು. ಅತಿಥಿಗಳಾಗಿ ವೃತ್ತ ನಿರೀಕ್ಷಕ ಅಶೋಕ್ ಪಿ. ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಬಿ.ಕಂಬಳಿ ಭಾಗವಹಿಸಿದ್ದರು. ಕರಾವಳಿ ಅಲ್ಪಸಂಖ್ಯಾತರ ಮೀನುಗಾರರ ಸಂಘದ ಉಪಾಧ್ಯಕ್ಷ ಅಹ್ಮದ್ ಬಾವಾ ಬಹುಮಾನ ವಿತರಿಸಿದರು.
ಶಾಲಾ ಶಿಕ್ಷಕಿಯರಾದ ಪೂರ್ಣಿಮಾ ಮತ್ತು ನೌಶಿನ್ ಯು. ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಶರತ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಸಪ್ನಾಜ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಇಸ್ಮಾಯೀಲ್ ಕ್ರೀಡಾಕೂಟವನ್ನು ಆಯೋಜಿಸಿದರು.







