ಮಾಜಿ ಸಚಿವ ಝಮೀರ್ ಅಹ್ಮದ್ ರನ್ನು ನಿಂದಿಸಿ ಪೋಸ್ಟ್: ಋಷಿ ಕುಮಾರ ವಿರುದ್ಧ ಆಯುಕ್ತರಿಗೆ ದೂರು

ಬೆಂಗಳೂರು, ಜ.7: ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ನಿಂದಿಸಿ ಅಸಭ್ಯವಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಆರೋಪದಡಿ ಋಷಿ ಕುಮಾರ ಸ್ವಾಮೀಜಿ ಎಂಬಾತನ ವಿರುದ್ಧ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿದ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯರು, ಸಮಾಜದಲ್ಲಿ ಅಶಾಂತಿ ವಾತಾವರಣ ಹುಟ್ಟು ಹಾಕಲು ಯತ್ನಿಸಿರುವ ಋಷಿ ಕುಮಾರ ಸ್ವಾಮೀಜಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಕಾರ್ಯದರ್ಶಿ ಬಿಂದುಗೌಡ, ಮಾಜಿ ಸಚಿವ ಝಮೀರ್ ಅಹ್ಮದ್ ಅವರನ್ನು ಗುರಿಯಾಗಿಸಿಕೊಂಡು ಋಷಿ ಕುಮಾರ ಸ್ವಾಮೀಜಿ ಅವಹೇಳನಕಾರಿ ಫೋಸ್ಟ್ ಹಾಕಿ ಕೋಮುಗಲಭೆಗೆ ಯತ್ನಿಸಿದ್ದಾನೆ. ಈತನ ವಿರುದ್ಧ ಕೂಡಲೇ ಪೊಲೀಸರು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಸಂವಿಧಾನ ಕುರಿತು ಅವಹೇಳನ ಪೋಸ್ಟ್‌ಗಳನ್ನು ಮಾಡಿದ್ದ ಯೋಗೀಶ್, ಋಷಿ ಕುಮಾರ ಎಂದೆಲ್ಲಾ ಹೆಸರನ್ನಿಟ್ಟಿಕೊಂಡಿರುವ ಈತನ ವಿರುದ್ಧ ಪೊಲೀಸರು ಕ್ರಮ ಜರುಗಿಸದಿದ್ದರೆ, ಪ್ರತಿಭಟನೆ ನಡೆಸಲಾಗುವುದು ಎಂದು ಬಿಂದುಗೌಡ ಎಚ್ಚರಿಕೆ ನೀಡಿದರು.







